ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಬೆಂಬಲಿಸುವ ಮೂಲಕ ಹೆಚ್ಚು ಮತಗಳ ಅಂತರದಿಂದ ಆಯ್ಕೆಮಾಡಲು ಶಿಕ್ಷಕರು ಸಹಕರಿಸಬೇಕೆಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಬೀರಿಹುಂಡಿ ಸರ್ಕಾರಿ ಪ್ರೌಢಶಾಲೆ, ಗೋಪಾಲಪುರ ಪ್ರೌಢಶಾಲೆ, ಡಿ. ಸಾಲುಂಡಿ ಪ್ರೌಢಶಾಲೆ, ಕೇರ್ಗಳ್ಳಿ ಪ್ರೌಢಶಾಲೆ, ಉದ್ಬೂರು ಪ್ರೌಢಶಾಲೆಗಳಿಗೆ ಭೇಟಿ ನೀಡಿ ಮತಯಾಚಿಸಿ ಮಾತನಾಡಿದ ಅವರು ದೇಶದಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ ತಂದಿದ್ದು ಕಾಂಗ್ರೆಸ್ ಪಕ್ಷ. ದೇಶದಲ್ಲಿನ ಅನಕ್ಷರತೆಯನ್ನು ಕೊನೆಗಾಣಿಸಲು ಅನೇಕ ಸುಧಾರಣೆಗಳನ್ನು ಮಾಡುವ ಮೂಲಕ ಇಂಜಿನಿಯರಿಂಗ್, ಮೆಡಿಕಲ್, ತಾಂತ್ರಿಕ, ಪ್ರಾಥಮಿಕ, ಪ್ರೌಢಶಾಲೆಗಳು, ಕಾಲೇಜುಗಳನ್ನು ನಿರ್ಮಾಣ ಮಾಡುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ.
ಕಡ್ಡಾಯ ಶಿಕ್ಷಣ, ಮಹಿಳೆಯರಿಗೆ ಉಚಿತ ಶಿಕ್ಷಣ, ಆರ್.ಟಿ.ಇ. ಕಾಯ್ದೆ, ಶಿಕ್ಷಕರ ನೇಮಕಕ್ಕೆ ಬೇಕಾದ ಸೌಲಭ್ಯ, ೬ನೇ ವೇತನ ಆಯೋಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸರ್ಕಾರಿ ನೌಕರರಿಗೆ ಶೇ. ೩೦ ರಷ್ಟು ವೇತನ ಹೆಚ್ಚು ಮಾಡಿದ್ದು, ೭ನೇ ವೇತನದ ಆಯೋಗ ಜಾರಿಯ ಬಗ್ಗೆ ಹಳೇ ಪಿಂಚಣಿ ವ್ಯವಸ್ಥೆ ಜಾರಿಯ ಬಗ್ಗೆ ಮುಖ್ಯಮಂತ್ರಿಗಳು ಚಿಂತನೆ ನಡೆಸುತ್ತಿದ್ದು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ೨೪ ವರ್ಷಗಳಿಂದ ಮೇಲ್ಮನೆ ಸದಸ್ಯರಾಗಿ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವ ಸರಳ ವ್ಯಕ್ತಿ ಮರಿತಿಬ್ಬೇಗೌಡರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ, ಸುಧಾ, ಮುರಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ. ಗುರುಸ್ವಾಮಿ, ಜೆ. ಸತೀಶ್‌ಕುಮಾರ್, ಜಿ.ಕೆ. ಬಸವಣ್ಣ, ಬಿ. ರವಿ, ಪ್ರಕಾಶ್ ಹಾಜರಿದ್ದರು.