ಬೆಂಗಳೂರು: 2003ರಲ್ಲಿ ಬಿಡುಗಡೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ನಮ್ಮ ಪ್ರೀತಿಯ ರಾಮು’ ಚಿತ್ರ ಇದೇ ಫೆಬ್ರವರಿ 14ರಂದು ಮರು ಬಿಡುಗಡೆಯಾಗುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಮರು ಬಿಡುಗಡೆಯಾಗುತ್ತಿರುವ ದರ್ಶನ್ ಅವರ ಪ್ರಥಮ ಚಿತ್ರ ಇದಾಗಿದೆ.
ಸಂಜಯ್-ವಿಜಯ್ ಜೋಡಿ ನಿರ್ದೇಶಿಸಿದ್ದ ಹಾಗೂ 1999ರಲ್ಲಿ ಬಿಡುಗಡೆಯಾಗಿದ್ದ ತಮಿಳು ಚಿತ್ರ ‘ವಸಂತಿಯುಮಂ ಲಕ್ಷ್ಮಿಯುಂ ಪಿನ್ನೆ ನಿಜಾನುಂ’ ರೀಮೇಕ್ ಆಗಿದ್ದ ‘ನಮ್ಮ ಪ್ರೀತಿಯ ರಾಮು’ ಚಿತ್ರವನ್ನು ಕನ್ನಡದಲ್ಲೂ ಅದೇ ಜೋಡಿ ನಿರ್ದೇಶಿಸಿತ್ತು. ದರ್ಶನ್ ತಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮ ಅಭಿನಯ ತೋರಿದ ಚಿತ್ರ ಎಂಬ ಹಿರಿಮೆಗೆ ಈ ಚಿತ್ರ ಭಾಜನವಾದರೂ, ಗಲ್ಲಾಪೆಟ್ಟಿಯಲ್ಲಿ ಮಾತ್ರ ಮುಗ್ಗರಿಸಿತ್ತು.
ದರ್ಶನ್ ನಟನೆಯ ಹಾಗೂ ಪ್ರಕಾಶ್ ನಿರ್ದೇಶಿಸಿರುವ ‘ಡೆವಿಲ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಅದಕ್ಕೂ ಮುನ್ನ, ‘ನಮ್ಮ ಪ್ರೀತಿಯ ರಾಮು’ ಚಿತ್ರದ ಮರು ಬಿಡುಗಡೆಗೆ ದರ್ಶನ್ ಮುಂದಾಗಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ.