ಮೈಸೂರು/ಸುತ್ತೂರು: ಮಠಗಳ ಅನ್ನದಾಸೋಹದ ಪ್ರೇರಣೆಯಿಂದ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಯೋಜನೆ ಜಾರಿಗೆ ತಂದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಆಡಳಿತಾವಧಿಯನ್ನು ಸ್ಮರಿಸಿಕೊಂಡರು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಭಾಗವಹಿಸಿ ರಾಜ್ಯ ಮಟ್ಟದ ಭಜನಾ ಮೇಳ, ದೇಸಿ ಆಟಗಳು,ಸೋಭಾನೆ ಪದ, ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ತುಮಕೂರಿನ ಸಿದ್ಧಗಂಗಾ ಮಠ ಮತ್ತು ಸುತ್ತೂರು ಮಠಕ್ಕೆ ಅಬಾರಿಯಾಗಿದ್ದೇನೆ. ನಾನು ಮತ್ತು ನಮ್ಮಕುಟುಂಬ ಈ ಮಠಗಳ ಭಕ್ತರು. ಇಲ್ಲಿನ ಅಕ್ಷರ ದಾಸೋಹ ಅನ್ನದಾಸೋಹ ನಮಗೆ ಪ್ರೇರಣೆ. ಆ ಕಾರಣದಿಂದಲೇ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಾಲಾ ಮಕ್ಕಳು ಹಸುವುನಿಂದ ಬಳಲಬಾರದು ಎಂದು 2001 ರಲ್ಲಿ ಮಧ್ಯಾಹ್ನದ ಬಿಸಿ ಊಟ ಯೋಜನೆ ಜಾರಿಗೆ ತಂದೆ. ನನ್ನ ಆಡಳಿತಾವಧಿಯಲ್ಲಿ ಮಳೆ ಇಲ್ಲ, ಬೆಳೆ ಇಲ್ಲ, ಅಶಾಂತಿಯ ವಾತಾವರಣ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳು ಎದುರಾದವು. ಆ ಸಂದರ್ಭದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳಿಗೆ ನಮ್ಮ ಯಾವ ಕಾರ್ಯಕ್ರಮಗಳು ನಿಂತರು ಚಿಂತೆಯಿಲ್ಲ, ಯಾವುದೇ ಕಾರಣಕ್ಕೂ ಮಧ್ಯಾಹ್ನದ ಬಿಸಿ ಊಟ ಯೋಜನೆ ನಿಲ್ಲಬಾರದು. ಇದಕ್ಕೆ ಬೇಕಿರುವ 300 ಕೋಟಿ ರೂ. ಗಳನ್ನು ತಕ್ಷಣ ಮಂಜೂರು ಮಾಡಬೇಕು ಎಂದು ಸೂಚಿಸಿದ್ದೆ ಎಂದರು.
ವಿವೇಕಾನಂದರ ವಾಣಿಯಂತೆ, ಹಸಿದ ಹೊಟ್ಟೆಗೆ ವೇದಾಂತ ಉಪದೇಶ ನೀಡುವುದಲ್ಲ, ಅನ್ನ ಹಾಕಿ ಎಂಬ ಧ್ಯೇಯವನ್ನು ಗಮನದಲ್ಲಿಟ್ಟುಕೊಂಡು ನಾನು ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ತಂದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರನ್ನು ಕಾಡುಗಳ್ಳ ಕ್ರೂರಿ ವೀರಪ್ಪನ್ ಅಪಹರಣ ಮಾಡಿ 110 ದಿನ ಕಾಡಿನಲ್ಲಿಟ್ಟುಕೊಂಡಿದ್ದ. ಈ ವೇಳೆ ನನಗೆ ಕತ್ತಲೆಯೇ ಆವರಿಸಿತ್ತು. ಈ ಸಂದರ್ಭದಲ್ಲಿ ನನಗೆ ಧೈರ್ಯ ತುಂಬಿದವರು ಬಾಲಗಂಗಾಧರ ನಾಥಸ್ವಾಮೀಜಿ ಮತ್ತು ಸುತ್ತೂರು ಸ್ವಾಮೀಜಿಗಳು ಎಂದು ಸ್ಮರಿಸಿಕೊಂಡರು.
ತುಮಕೂರಿನ ಸಿದ್ಧಗಂಗ ಮಠದ ಸ್ವಾಮೀಜಿಗಳ ಶಿವೈಕ್ಯಾನಂತರ ಸುತ್ತೂರು ಸ್ವಾಮೀಜಿ ಆ ಸ್ಥಾನವನ್ನು ತುಂಬಿದ್ದಾರೆ. ಅವರ ಶಿಕ್ಷಣ, ದಾಸೋಹ ನಮ್ಮೆಲ್ಲರಿಗೂ ಪ್ರೇರಣೆ ಎಂದು ಸುತ್ತೂರು ಮಠದ ಸೇವೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ಬಸವಾನಂದ ಸ್ವಾಮೀಜಿ, ತಪೋರತ್ನ ಕರುಣಾದೇವಿ ಮಾತಾ, ಸಂದೇಶ ನೀಡಿದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಸಂಸದೆ ಸುಮಲತಾ ಅಂಬರೀಶ್, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸಪೂಜಾರಿ, ಮಾತನಾಡಿದರು.ಮರಿಲ್ಯಾಂಡ್ ನ ಎಸ್.ಕೆ.ಮಂಜುನಾಥ್, ಚಲನಚಿತ್ರ ನಟ ಡಾರ್ಲಿಂಗ್ ಕೃಷ್ಣ, ಉಪಸ್ಥಿತರಿದ್ದರು. ರಾಜಶೇಖರ್ ವಂದಿಸಿದರೆ, ಡಾ.ರೇಚಣ್ಣ ನಿರೂಪಿಸಿದರು.