ಬೆಳಗಾವಿ : ಪವರ್ ಶೇರಿಂಗ್ ವಿಚಾರ ಕಾಂಗ್ರೆಸ್ನಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದು, ಬ್ರೇಕ್ಫಾಸ್ಟ್ ಮೀಟಿಂಗ್ಗಳ ಬಳಿಕ ತಣ್ಣಗಾಗಿದ್ದ ಕುರ್ಚಿ ವಿಚಾರ ಇದೀಗ ಸದ್ದು ಮಾಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಕೊನೇ ದಿನವಾದ ಇಂದು ಸಿಎಂ ಸಿದ್ದರಾಮಯ್ಯ, ನಾಯಕತ್ವ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕಲು ಮುಂದಾಗಿದ್ದು, ಈ ವೇಳೆ ಮತ್ತೆ ಸಿಎಂ ಕುರ್ಚಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಮತ್ತೆ ನಾನೇ ಸಿಎಂ ಎನ್ನುವ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಇನ್ನೂ ಕೊನೆ ದಿನದ ಅಧಿವೇಶಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಗೈರಾಗಿದ್ದು, ಈ ವೇಳೆ ಕಲಾಪದಲ್ಲಿ ಕುರ್ಚಿ ಕಾದಾಟದ ವಿಚಾರ ರಂಗೇರಿದೆ. ಈ ಬಗ್ಗೆ ಸಿಎಂ ಕುರ್ಚಿ ಗೊಂದಲಕ್ಕೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ಈ ಹಿಂದೆ ನಾನು ಐದು ವರ್ಷಗಳ ಕಾಲ ಸಿಎಂ ಆಗಿದ್ದೆ. ಇವಾಗ ಎರಡನೇ ಬಾರಿಗೆ ಸಿಎಂ ಆಗಿದ್ದೇನೆ. ನನ್ನ ಪ್ರಕಾರ ಹೈಕಮಾಂಡ್ ನನ್ನ ಪರವಾಗಿಯೇ ಇದೆ. ಹೀಗಾಗಿ ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಆಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಮುನಿರತ್ನ, ಹಿಂದೆ ಅದೇ ಜಾಗದಲ್ಲಿ ಕೂತು ಮೇಜು ತಟ್ಟಿ ಹೇಳ್ತಿದ್ರಲ್ಲ, ಈಗ ತೋಳು ತಟ್ಟಿ ಹೇಳಿ ನಾನೇ ಐದು ವರ್ಷ ಸಿಎಂ ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅಶೋಕಾ ನೀನು ಹೇಳಯ್ಯ, ಐದು ವರ್ಷ ನಾನೇ ವಿರೋಧ ಪಕ್ಷದ ನಾಯಕ ಅಂತ ಟಾಂಗ್ ಕೊಟ್ಟಿದ್ದಾರೆ.
ವಿಪಕ್ಷ ನಾಯಕರ ಪ್ರತಿ ಪ್ರಶ್ನೆಗಳಿಗೂ ಸಿಎಂ ಸಿದ್ದರಾಮಯ್ಯ ಅವ್ರು ತಮ್ಮದೇ ಸ್ಟೈಲ್ನಲ್ಲಿ ಉತ್ತರ ಕೊಟ್ಟಿದ್ದು, ನಮಗೆ ಯಾರು ಕೂಡ ನಿರ್ದೇಶನ ಮಾಡೋಲ್ಲ. ಆದರೆ ಬಿಜೆಪಿಗರಿಗೆ ನಿರ್ದೇಶನ ಕೊಡೋರು ಇದ್ದಾರೆ. ಅವರು ಏನು ನಿರ್ದೇಶನ ಕೊಡ್ತಾರೆ ಆ ರೀತಿ ಆಕ್ಟಿಂಗ್ ಮಾಡೋರು ಇವರು. ನಮಗೆ ನಾವೇ ಡೈರೆಕ್ಟರ್, ನಾವು ನಮ್ಮ ಮನಸ್ಸಿನಂತೆ ನಡೆಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.



