ಕೆ.ಆರ್.ನಗರ: ತಾಲೂಕಿನ ಹಂಪಾಪುರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಾಲ್ಕು ಕಂಬಗಳ ಮೆರವಣಿಗೆ ನಿನ್ನೆ ರಾತ್ರಿ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಭಕ್ತರು ಸಂಜೆಯಿಂದ ಮಧ್ಯ ರಾತ್ರಿಯವರೆಗೆ ದೀಪಾಲಂಕಾರ ವೀಕ್ಷಿಸಿದರು.
ಹಬ್ಬದ ಅಂಗವಾಗಿ ಪ್ರತೀವರ್ಷದಂತೆ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಶೃಂಗರಿಸುವುದರ ಜತೆಗೆ ಹಾಸನ-ಮೈಸೂರು ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು. ಸನ್ಯಾಸಿಪುರ ಮತ್ತು ಹಂಪಾಪುರದ ಪ್ರಮುಖ ಬೀದಿಗಳಲ್ಲಿ ಕಂಬದ ಮೆರವಣಿಗೆ ನಡೆಸಿ ದೇವಾಲಯದ ಆವರಣದಲ್ಲಿ ನಿಲ್ಲಿಸಿ ಪೂಜೆ ಸಲ್ಲಿಸಲಾಯಿತು. ಮೆರವಣಿಗೆ ಸಾಗುವ ಬೀದಿಗಳಲ್ಲಿ ತಮ್ಮ ತಮ್ಮ ಮನೆಗಳ ಮುಂಭಾಗ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ನೀರು ಸುರಿದು ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿದ್ದರು. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರೀಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ದೃಶ್ಯ ಕಂಡು ಬಂದಿತು. ಈ ಹಿಂದೆ ಹರಕೆ ಹೊತ್ತಿದ್ದವರು ಮೆರವಣಿಗೆ ತಮ್ಮ ಮನೆಯ ಮುಂಭಾಗದ ಆಗಮಿಸುತ್ತಿದ್ದಂತೆ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ ಬಲಿ ಪೂಜೆ ನಡೆಸಿ ತಮ್ಮ ಹರಕೆಗಳನ್ನು ತೀರಿಸಿದರು.
ಸುಮಾರು ೧೨ ಕಿಲೋಮೀಟರ್ ದೂರ ತಿಪ್ಪೂರು ಗ್ರಾಮದಿಂದ ಬರಿಗಾಲಿನಲ್ಲಿ ಅಡಕೆ ಮರಗಳನ್ನು ಹೊತ್ತು ತಂದು ಹಂಪಾಪುರದ ದೇವಾಲಯದ ಮುಂಭಾಗ ಬೆಳಗಿನ ಜಾವ ಪ್ರತಿಷ್ಠಾಪಿಸಿ, ಬುಧುವಾರ ಸಂಜೆ ದೇವಿಯ ಉತ್ಸವ ಮೂರ್ತಿಯನ್ನು ಇದೇ ಅಡಕೆ ಮರಗಳಿಗೆ ಕಟ್ಟಿದ ಉಯ್ಯಾಲೆಯಲ್ಲಿ ಕೂರಿಸಿ ವೈಭವದಿಂದ ಉಯ್ಯಾಲೋತ್ಸವ ನಡೆಸಲಾಯಿತು.
ಶಾಸಕ ಡಿ.ರವಿಶಂಕರ್ ಮತ್ತು ಪತ್ನಿ ಸುನೀತಾರೊಂದಿಗೆ ಹಬ್ಬದ ಅಂಗವಾಗಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿ, ರೈತರು ಬೆಳೆ ಬೆಳೆದು ಅಭಿವೃದ್ಧಿ ಹೊಂದುವುದರ ಜತೆಗೆ ಜನತೆಯ ಇಷ್ಟಾರ್ಥಗಳನ್ನು ದುರ್ಗಾಪರಮೇಶ್ವರಿ ನೆರವೇರಿಸುವಂತೆ ಪ್ರಾರ್ಥಿಸಿದರು. ಗ್ರಾ.ಪಂ. ಅಧ್ಯಕ್ಷೆ ರಮ್ಯಮಂಜುನಾಥ್, ಉಪಾಧ್ಯಕ್ಷ ಹೆಚ್.ಈ.ಮಹದೇವಕುಮಾರ್, ಸದಸ್ಯರಾದ ಹೆಚ್.ಡಿ.ನಾಗೇಶ್, ರವಿಕುಮಾರ್, ವಿದ್ಯಾನಾರಾಯಣ್, ಗೌರಮ್ಮಪರಶುರಾಮ್, ಲೋಕೇಶ್, ರೇವಣ್ಣ, ಹರಿರಾಜು, ಟಿಎಪಿಸಿಎಂಎಸ್‌ನ ನಿರ್ದೇಶಕ ಹೆಚ್.ಪಿ.ಪ್ರಶಾಂತ್,, ಎಪಿಎಂಸಿ ಮಾಜಿ ನಿರ್ದೇಶಕ ಬಿ.ಎಂ.ನಾಗರಾಜು, ಹಂಪಾಪುರ ವಿಎಸ್‌ಎಸ್‌ಎನ್ ನಿರ್ದೇಶಕ ಕುಚೇಲ, ಮುಖಂಡರಾದ ದೇವರಾಜು, ಗೋವಿಂದೇಗೌಡ, ಮಂಚನಹಳ್ಳಿಧನು ಮತ್ತಿತರರು ಹಾಜರಿದ್ದರು
