ರಾಮನಗರ, ಜು. ೧೯ : ಕೆನರಾಬ್ಯಾಂಕ್ ಪ್ರಧಾನ ಕಚೇರಿ ಬೆಂಗಳೂರು – ಮಹಿಳಾ ಸಬಲೀಕರಣ ವಿಭಾಗ ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಹಾರೋಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಬಗ್ಗೆ ಒಂದು ದಿನದ ಉಚಿತ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕೆನರಾಬ್ಯಾಂಕ್ ಪ್ರಧಾನ ಕಚೇರಿಯ ಮಹಿಳಾ ಸಬಲೀಕರಣ ವಿಭಾಗದ ವ್ಯವಸ್ಥಾಪಕರಾದ ರಾಮಚಂದ್ರ ಅವರು ಉದ್ಘಾಟಿಸಿ, ನಮ್ಮ ಕೆನರಾಬ್ಯಾಂಕ್ ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಸಾಮಾನ್ಯರ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಸ್ವ ಉದ್ಯೋಗ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ ನೀಡುವುದರ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿಯೇ ಒಂದು ವಿಭಾಗವೇ ಇದ್ದು, ಇದರ ಮೂಲಕ ಮಹಿಳೆಯರನ್ನು ಉತ್ತೇಜಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಇವುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಗಾರವೂ ಒಂದಾಗಿದೆ. ಇಂತಹ ಸಮಾಜ ಮುಖಿ ಕೆಲಸ ಕಾರ್ಯಗಳ ಮೂಲಕ ನಮ್ಮ ಕೆನರಾಬ್ಯಾಂಕ್ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ತನ್ನ ಸೌ¯ಭ್ಯಗಳನ್ನು ವಿಸ್ತರಿಸುತ್ತಿದೆ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಹಾರೋಹಳ್ಳಿ ಪ್ರಥಮ ದರ್ಜೆ ಪದವಿ ಕಾಲೇಜಿನ ಉಪನ್ಯಾಸಕರಾದ ನಾಗಭೂಷಣ್ ಅವರು ಮಾತನಾಡಿ, ಸಂಸ್ಥೆಯು ಗ್ರಾಮೀಣ ಯುವಜನತೆಯ ಏಳಿಗೆಗಾಗಿ ಶ್ರಮಿಸುತ್ತಿದೆ. ಇದರ ಜೊತೆಗೆ ಇಂತಹ ಕಾರ್ಯಾಗಾರವನ್ನು ಆಯೋಜಿಸಿರುವುದು ನಮ್ಮ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದು, ಬ್ಯಾಂಕಿಗ್ ಪರೀಕ್ಷೆಗಳ ಬಗ್ಗೆ ನಮ್ಮ ಗ್ರಾಮೀಣ ಯುವಜನರಿಗಿರುವ ಭಯವನ್ನು ಹೋಗಲಾಡಿಸುವುದರ ಜೊತೆಗೆ ಅವರಲ್ಲಿ ಆತ್ಮಸ್ಥೆರ್ಯ ಮೂಡಿಸಲು ನೆರವಾಗುತ್ತದೆ ಎಂಬುದಾಗಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ನಿರ್ದೇಶಕರಾದ ಚಂದ್ರ ಚರಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ, ನಮ್ಮ ಸಾಕಷ್ಟು ರಾಷ್ಟಿಕೃತ ಬ್ಯಾಂಕುಗಳು ಉದಯಿಸಿದ್ದೇ ನಮ್ಮ ಕರ್ನಾಟಕದಲ್ಲಿ.ಅಂತಹ ಮಹಾನ್ ಮೇಧಾವಿ ನಾಯಕರಿಗೆ ಜನ್ಮವಿತ್ತ ನಾಡಿನಲ್ಲಿ ನಮ್ಮ ಕನ್ನಡಿಗರು ಬೆರಳೆಣಿಕೆ ಮಂದಿ ಉದ್ಯೋಗ ಪಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ.
ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಬದಲಾಗಬೇಕು. ನಮ್ಮ ನಾಡಿನವರು ನಮ್ಮ ಬ್ಯಾಂಕಿಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವುದರಿಂದ ನಮ್ಮ ಗ್ರಾಮೀಣ ಜನರು ಮುಕ್ತವಾಗಿ ಬ್ಯಾಂಕಿನಲ್ಲಿ ವ್ಯವಹರಿಸಲು ಸಹಕಾರಿಯಾಗುತ್ತದೆ. ಪದವಿ ಪಡೆದ ನಮ್ಮ ಯುವಜನತೆ ನಿರುದ್ಯೋಗಿಗಳಾಗಿ ಸಮಯ ವ್ಯರ್ಥ ಮಾಡದೇ, ಬ್ಯಾಂಕಿಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವುದರಿಂದ ಆರ್ಥಿಕವಾಗಿ ಸದೃಢರಾಗಬಹುದಾಗಿದೆ.ಇದೇ ಪ್ರಪ್ರಥಮ ಬಾರಿಗೆ ನಮ್ಮ ತರಬೇತಿ ಸಂಸ್ಥೆಯಲ್ಲಿ ಕಾರ್ಯಗಾರವನ್ನು ಆಯೋಜಿಸಲಾಗಿದ್ದು, ೫೦ ಕ್ಕೂ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡಿರುವುದು ಸಂತೋಷವಾಗಿದೆ ಎಂಬುದಾಗಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಕಾರ್ಯಗಾರವನ್ನು ಪ್ರಾರಂಭಿಸಿದ ಆರ್. ಕೆ ಬಾಲಚಂದ್ರ ಅವರು, ಬ್ಯಾಂಕಿಗ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ವಹಿಸಬೇಕಾದ ಪೂರ್ವಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಯಶಸ್ಸನ್ನು ಸಾಧಿಸುವುದೇಗೆಂದು ತಿಳಿಸಿದರು. ನಮ್ಮ ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎಂದು ತಿಳಿದಿರುವ ಗಣಿತ ವಿಷಯದ ಸಮಸ್ಯೆಗಳನ್ನು ಸರಳವಾಗಿ ಪರಿಹರಿಸುವುದರೊಂದಿಗೆ ನಾವು ಸಹ ಬ್ಯಾಂಕಿಗ್ ಕ್ಷೇತ್ರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಮರ್ಥರೆಂಬ ಆತ್ಮ ವಿಶ್ವಾಸವನ್ನು ಶಿಬಿರಾರ್ಥಿಗಳಲ್ಲಿ ತುಂಬಿದರು. ಆರ್.ಆರ್.ಬಿ, ಐಬಿಪಿಎಸ್, ಎಸ್‌ಬಿಐ ಇಂತಹ ಪರೀಕ್ಷೆಗಳ ಬಗ್ಗೆ ನಮ್ಮ ವಿದ್ಯಾರ್ಥಿಗಳಲ್ಲಿದ್ದ ಗೊಂದಲಗಳನ್ನು ಹೋಗಲಾಡಿಸುತ್ತಾ ಶಿಬಿರಾರ್ಥಿಗಳ ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಹಿತಿ ನೀಡಿದರು.
ಕಾರ್ಯಗಾರದಲ್ಲಿ ಚಟುವಟಿಕೆಯಿಂದ ಭಾಗವಹಿಸಿದ್ದ ಶಿಬಿರಾರ್ಥಿಗಳು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.