ರಾಮನಗರ: ದುಬೈನ ಪೊಲೀಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೬ ರಿಂದ ೮ ವರ್ಷ ದೊಳಗಿನ ಮಕ್ಕಳಿಗೆ ಅಂತರರಾಷ್ಟ್ರ ಮಟ್ಟದ ಟೇಕ್ವಾಂಡೋ ಸ್ಪಾರಿಂಗ್ ಮತ್ತು ಪ್ಯಾಟರ್ನ್ಸ್ ಸ್ಪರ್ಧೆಯಲ್ಲಿ ಭಾರತ ದೇಶದಿಂದ ಪ್ರತಿನಿಧಿಸಿದ ರಾಮನಗರದ ಶಾನ್ವಿ ಸತೀಶ್ ಒಂದು ಚಿನ್ನ, ಎರಡು ಬೆಳ್ಳಿ ಪದಕ ಗಳಿಸಿದ್ದಾರೆ.
ಅಂತರ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ೬ ರಾಷ್ಟ್ರದ ೨೫೦ ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಭಾರತ ದೇಶದಿಂದ ೨೮ ಮಂದಿ ಸ್ಪರ್ಧಿಗಳು ಇದ್ದರು. ಯುಎಇ, ಕಜಾಕಿಸ್ತಾನ, ಬಾಂಗ್ಲಾದೇಶ, ರಾಷ್ಟ್ರ, ಇತಿಯೋಪಿಯ ಮತ್ತು ಉಜ್ಬೇಕಿಸ್ತಾನ್ ರಾಷ್ಟ್ರದ ಪ್ರತಿಸ್ಪರ್ಧಿಗಳು ಭಾಗವಹಿಸಿದ್ದರು. ಶಾನ್ವಿಗೆ ಅಂತಿಮ ಪಂದ್ಯದಲ್ಲಿ ಯುಎಇ ಸ್ಪರ್ಧಾಳು ಎದುರಾಳಿಯಾಗಿದ್ದರು. ಕೊನೆಯ ಸ್ಪಾರಿಂಗ್ ಪಂದ್ಯದಲ್ಲಿ ಶಾನ್ವಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡರು. ರಾಮನಗರ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್ ಅವರ ಪುತ್ರಿಯಾಗಿದ್ದಾರೆ.
ಒಂದು ಚಿನ್ನ, ಎರಡು ಬೆಳ್ಳಿ ಪದಕ ಗಳಿಸಿ ಭಾರತಕ್ಕೆ ಕೀರ್ತಿ ತಂದಿರುವ ಶಾನ್ವಿಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಮತ್ತು ಉಪವಿಭಾಗಾಧಿಕಾರಿ ಬಿನೋಯ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು ಟಿ.ಜಿ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಶಿವಸ್ವಾಮಿ, ಖಜಾಂಚಿ ರಾಜಶೇಖರ ಮೂರ್ತಿ, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ನೇಟಸ್ ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಮತ್ತು ತರಬೇತುದಾರ ಬಾಲರಾಜನ್ ರವರು ಅಭಿನಂದಿಸಿದ್ದಾರೆ.