ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಾಚಿಗಂ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರಿರುವ ಮಾಹಿತಿಯ ಹಿನ್ನೆಲೆ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಡಿ.೦೧ರಂದು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಇಂದು ಬೆಳಿಗ್ಗೆ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.
ದಾಚಿಗಂ ಅರಣ್ಯ ಪ್ರದೇಶಕ್ಕೂ ಮುನ್ನ ಶ್ರೀನಗರದ ಹರ್ವಾನ್ ಅರಣ್ಯಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ನಂತರ ಉಗ್ರರ ಅಡಗುತಾಣ ಸುತ್ತುವರಿದಾಗ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ನ.೨೩ ರಂದು, ಬಾರಾಮುಲ್ಲಾ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿಯಾಗಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕುಂಜರ್ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಭೇದಿಸುವ ಮೂಲಕ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.