ಬೆಂಗಳೂರು: ಬೇಡಿಕೆ ಮತ್ತು ಪೂರೈಕೆ ಕೊರತೆಯಿಂದಾಗಿ ಈರುಳ್ಳಿಯ ಚಿಲ್ಲರೆ ಮತ್ತು ಸಗಟು ಬೆಲೆಯಲ್ಲಿ ಏರಿಕೆಯಾಗಿದೆ. ಮಳೆ ಕೊರತೆಯು ರಾಜ್ಯದಲ್ಲಿ ಈರುಳ್ಳಿ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಬೇಡಿಕೆಯ ಹಠಾತ್ ಹೆಚ್ಚಳದಿಂದಾಗಿ ಇತರ ರಾಜ್ಯಗಳಿಂದ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಬೆಂಗಳೂರು ನಗರದಲ್ಲಿ ಈರುಳ್ಳಿ ಕೆಜಿಗೆ ೭೦ ರೂ.ಗೆ ಮಾರಾಟವಾಗುತ್ತಿದ್ದು, ಸದ್ಯದ ಪರಿಸ್ಥಿತಿ ಮುಂದುವರಿದರೆ ಕೆಜಿಗೆ ೧೦೦ ರೂ. ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕಳೆದ ಹತ್ತು ದಿನಗಳಿಂದ ಈರುಳ್ಳಿ ಪೂರೈಕೆಯಲ್ಲಿ ದಿಢೀರ್ ಇಳಿಕೆಯಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಎಂಪಿಸಿ) ಅಧಿಕಾರಿಗಳು ಮತ್ತು ಚಿಲ್ಲರೆ ಮಾರಾಟಗಾರರು ತಿಳಿಸಿದ್ದಾರೆ. ಯಶವನಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ದಿನವೊಂದಕ್ಕೆ ೭೦ರಿಂದ ೭೫ ಮೂಟೆ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ ಸದ್ಯ ಮಾರುಕಟ್ಟೆಗೆ ೪೦ರಿಂದ ೫೦ ಮೂಟೆ ಮಾತ್ರ ಈರುಳ್ಳಿ ಪೂರೈಕೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಶೇ ೫೦ರಷ್ಟು ಏರಿಕೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ತರೀಕೆರೆ ಪ್ರದೇಶದಲ್ಲಿ ೧೦,೯೫೦ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಮಳೆಯ ಕೊರತೆಯಿಂದಾಗಿ ರೈತರು ಕೇವಲ ೬,೨೧೪ ಹೆಕ್ಟೇರ್‌ನಲ್ಲಿ ಈರುಳ್ಳಿ ಕೊಯ್ಲು ಮಾಡಲು ಸಾಧ್ಯವಾಯಿತು. ಮುಂಗಾರು ಮಳೆಯ ಕೊರತೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ೬,೧೨೬ ಹೆಕ್ಟೇರ್ ಈರುಳ್ಳಿ ಬೆಳೆ ನಾಶವಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.