ಚಿತ್ರದುರ್ಗ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ಇದೀಗ ಇನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್ (ಇಡಿ) ಅಧಿಕಾರಿಗಳು ಮತ್ತೊಮ್ಮೆ ಚಳ್ಳಕೆರೆ ಸೇರಿ ಹಲವೆಡೆ ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಇಡಿ ತಂಡವು ಶಾಸಕರ ನಿವಾಸದಲ್ಲಿ ಪರಿಶೀಲನೆ ಆರಂಭಿಸಿದ್ದು, ಈ ತನಿಖೆಯು ವಿಸ್ತೃತವಾಗುವ ಲಕ್ಷಣವಿದೆ. ವೀರಶೈವ ಸಹಕಾರಿ ಬ್ಯಾಂಕ್ ಮತ್ತು ಮಹೇಂದ್ರ ಕೋಟಕ್ ಬ್ಯಾಂಕ್ ಸೇರಿ ಶಾಸಕರಿಗೆ ಸಂಬಂಧಿಸಿದ ಹಣಕಾಸು ಸಂಸ್ಥೆಗಳಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.
ಇದಕ್ಕೂ ಮುನ್ನ ನಡೆದ ವಿಚಾರಣೆಯಲ್ಲಿ ಶಾಸಕ ವೀರೇಂದ್ರ ಪಪ್ಪಿಯಿಂದ ಪಡೆದುಕೊಂಡ ಮಾಹಿತಿಯ ಆಧಾರದಲ್ಲಿ ಇಡಿಗೆ ಹೊಸ ಸುಳಿವು ಲಭಿಸಿದ್ದು, ಅದರಂತೆ ಇಂದು ಮತ್ತೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣವು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇಡಿಯಿಂದ ಶಾಸಕರ ಬಂಧನ ಮತ್ತು ಮತ್ತೆ ಮುಂದುವರೆದ ದಾಳಿಗಳು ಇನ್ನಷ್ಟು ತೀವ್ರತೆ ಪಡೆಯುವ ಸಾಧ್ಯತೆ ಇದೆ.