ಮೈಸೂರು: ಮೈಸೂರು ನಗರದಲ್ಲಿ ಆನ್‌ಲೈನ್ ವಂಚನೆ ಸಂಬಂಧಿಸಿ ಎರಡು ಗಂಭೀರ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಘಟನೆಯು ಹೆಚ್ಚುತ್ತಿರುವ ಡಿಜಿಟಲ್ ಅಪರಾಧಗಳ ವಿರುದ್ಧ ಜನರಲ್ಲಿ ಎಚ್ಚರಿಕೆ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮೊದಲ ಪ್ರಕರಣದಲ್ಲಿ, ಗಾಯತ್ರಿಪುರಂ ಮತ್ತು ಕನಕದಾಸನಗರದ ನಿವಾಸಿಯಾದ ನಿವೃತ್ತ ಅಧಿಕಾರಿ ಹಾಗೂ ಇಂಜಿನಿಯರ್, ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಆಮಿಷ ನೀಡಿ, ವಂಚಕರಿಂದ ₹1.52 ಕೋಟಿ ರೂ. ಕಳೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಷೇರು ಮಾರುಕಟ್ಟೆಯ ಲಾಭದಾಯಕತೆಯ ಬಗ್ಗೆ ವಿಡಿಯೋ ಹಂಚಿದ ಖದೀಮರು, ಅವರ ನಂಬಿಕೆಗೆ ಪಾತ್ರವಾಗಿ ‘ಆಪ್ಸ್ ಟಾಕ್ಸ್ ವ್ಯಾಲ್ಯೂ’ ಎಂಬ ವಾಟ್ಸಾಪ್ ಗ್ರೂಪಿಗೆ ಸೇರಿಸಿಕೊಂಡಿದ್ದಾರೆ. ಆರಂಭದಲ್ಲಿ ಲಾಭ ತೋರಿದ ವಂಚಕರು, ಬಳಿಕ ಹಂತ ಹಂತವಾಗಿ ದೊಡ್ಡ ಮೊತ್ತದ ಹಣ ಪಡೆಯುವ ಮೂಲಕ ಭಾರೀ ವಂಚನೆ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ, ಖದೀಮರು ತಮ್ಮನ್ನು ಮುಂಬೈ ಪೊಲೀಸರಾಗಿದ್ದಾರೆಂದು ಪರಿಚಯಿಸಿ, ನಿವೃತ್ತ ಅಧಿಕಾರಿಯೊಬ್ಬರಿಗೆ ಕರೆ ಮಾಡಿ, “ನೀವು ಅಪರಾಧದಲ್ಲಿ ಭಾಗಿಯಾಗಿದ್ದೀರಿ, ನಿಮ್ಮ ಖಾತೆ ಸೀಜ್ ಮಾಡಲಾಗುತ್ತದೆ” ಎಂಬ ಭೀತಿಗೆ ದೂಡಿದರು. ಈ ರೀತಿಯ ಬೆದರಿಕೆಯ ಮಾತುಗಳಿಂದ ಅವರು ₹11.80 ಲಕ್ಷ ಹಣವನ್ನು ಖಾತೆಗೆ ಹಾಕಿಸಿಕೊಂಡಿದ್ದಾರೆ.
ಈ ಎರಡೂ ಪ್ರಕರಣಗಳು ಈಗ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಶೀಘ್ರದಲ್ಲೇ ಆರೋಪಿಗಳ ಪತ್ತೆ ಕಾರ್ಯ ನಡೆಯಲಿದೆ. ಸಾರ್ವಜನಿಕರಿಗೆ ಇಂತಹ ಆನ್‌ಲೈನ್ ವಂಚನೆಗಳಿಂದ ಎಚ್ಚರಿಕೆಯಿಂದಿರುವುದು ಮತ್ತು ಅನುಮಾನಾಸ್ಪದ ಲಿಂಕ್ ಅಥವಾ ಕರೆಗಳನ್ನು ತಕ್ಷಣ ವರದಿ ಮಾಡುವಂತೆ ಸೂಚಿಸಲಾಗಿದೆ.