ಬೆಂಗಳೂರು : ಹಣ ಪಣಕ್ಕಿಟ್ಟು ಆಡಲಾಗುವ ಆನ್‌ಲೈನ್ ಆಟಗಳನ್ನು ನಿಷೇಧಿಸಿ ಈಚೆಗೆ ಕೇಂದ್ರ ಸರ್ಕಾರ ರೂಪಿಸಿರುವ ಆನ್‌ಲೈನ್ ಗೇಮಿಂಗ್ ಕಾಯಿದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆರ್ಯಮಾ ಸುಂದರಮ್, ‘ಕಾಯಿದೆಯನ್ನು ಪ್ರಶ್ನಿಸಲಾಗಿದೆ. ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಿದ್ದು, ಅದರ ಅಧಿಸೂಚನೆ ಇನ್ನೂ ಪ್ರಕಟವಾಗಿಲ್ಲ. ಇಲ್ಲಿ ಲಕ್ಷಾಂತರ ಮಂದಿಯ ಉದ್ಯೋಗ ಹೋಗುತ್ತೆ. ರಾತ್ರೋರಾತ್ರಿ ಗೇಮಿಂಗ್ ಕ್ಷೇತ್ರವನ್ನು ಮುಚ್ಚಿದರೆ ಅದರಿಂದ ಭಾರಿ ಅಪಾಯ ಎದುರಾಗಲಿದೆ’ ಎಂದರು
‘ನಮ್ಮ ವಾದ ಪೂರ್ಣಗೊಳ್ಳುವವರೆಗೆ ಕೇಂದ್ರ ಸರ್ಕಾರವು ಕಾಯಿದೆಯ ಅಧಿಸೂಚನೆ ಪ್ರಕಟಿಸಬಾರದು ಮತ್ತು ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಬೇಕು. ಇಲ್ಲವೇ, ಕಾಯಿದೆಯ ಅಧಿಸೂಚನೆ ಪ್ರಕಟಿಸುವುದಕ್ಕೂ ಒಂದು ವಾರ ಮುಂಚೆ ನಮಗೆ ಮಾಹಿತಿ ನೀಡಿದರೆ ನ್ಯಾಯಾಲಯದ ಮುಂದೆ ಬರುತ್ತೇವೆ’ ಎಂದು ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆರ್ಯಮಾ ಸುಂದರಮ್ ಹೇಳಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಿದ ಬಳಿಕ ಅಧಿಸೂಚನೆ ಪ್ರಕಟಿಸುವುದು ಸಾಂವಿಧಾನಿಕ ಪ್ರಕ್ರಿಯೆ. ಯಾರಿಗೋ ಸಮಸ್ಯೆಯಾಗಿದೆ ಎಂದು ಕಾಯಿದೆಯ ಅಧಿಸೂಚನೆ ಪ್ರಕಟಿಸುವುದಕ್ಕೂ ಮುನ್ನ ಅವರಿಗೆ ಮುಂಚಿತವಾಗಿ ತಿಳಿಸುವ ಅಗತ್ಯವಿಲ್ಲ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು. ಇಲ್ಲಿ ಗಡಿಯಾಚೆಗಿನ ಪರಿಣಾಮಗಳಿದ್ದು, ನೋಟಿಸ್ ಜಾರಿ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ’ ಎಂದರು.
ಆಗ ಪೀಠವು ‘ಕಾಯಿದೆಯ ಅಧಿಸೂಚನೆ ಶೀಘ್ರದಲ್ಲಿ ಆಗುತ್ತದೆಯೇ?’ ಎಂದು ಮೆಹ್ತಾರನ್ನು ಪ್ರಶ್ನಿಸಿತು. ಅದಕ್ಕೆ ಮೆಹ್ತಾ ಈ ವಿಚಾರದಲ್ಲಿ ಸೂಚನೆ ಪಡೆಯಬೇಕು. ಆದರೆ, ಅಧಿಸೂಚನೆ ಪ್ರಕಟವಾಗಲಿದೆ ಎಂದರು.
ವಾದ ಆಲಿಸಿದ ಪೀಠವು ಕಾಯಿದೆಯ ಸೆಕ್ಷನ್‌ಗಳಾದ 2(1)(G), 5, 6, 7 ಮತ್ತು 9ಕ್ಕೆ ತಡೆ ನೀಡಬೇಕು. ಅರ್ಜಿದಾರರ ವಿರುದ್ಧ ಯಾವುದೇ ದಂಡನೀಯ ಕ್ರಮಕೈಗೊಳ್ಳದಂತೆ ನಿರ್ದೇಶಿಸಬೇಕು ಎಂದು ಕೋರಿರುವ ಮಧ್ಯಂತರ ಕೋರಿಕೆಗೆ ಕೇಂದ್ರ ಸರ್ಕಾರವು ಸೆಪ್ಟೆಂಬರ್ 8ರೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.
ಪೋಕರ್, ರಮ್ಮಿಯಂತಹ ಜೂಜಾಟಗಳಿಗೆ ನಿಷೇಧ
ಈ ಮಸೂದೆಯು ಇ-ಸ್ಪೋರ್ಟ್ಸ್ ಮತ್ತು ಆನ್ ಲೈನ್ ಸಾಮಾಜಿಕ ಆಟಗಳನ್ನು ಪ್ರೋತ್ಸಾಹಿಸುತ್ತದೆ. ಆದರೆ ಹಾನಿಕಾರಕ ಆನ್ ಲೈನ್ ಹಣದ ಗೇಮಿಂಗ್ ಸೇವೆಗಳು, ಅವುಗಳ ಜಾಹೀರಾತುಗಳು ಮತ್ತು ಹಣಕಾಸು ವ್ಯವಹಾರಗಳನ್ನು ನಿಷೇಧಿಸುತ್ತದೆ. ಆನ್ ಲೈನ್ ಫ್ಯಾಂಟಸಿ ಸ್ಪೋರ್ಟ್ಸ್‌ನಿಂದ ಹಿಡಿದು ಆನ್ ಲೈನ್ ಜೂಜು (ಪೋಕರ್, ರಮ್ಮಿ ಮತ್ತು ಇತರ ಕಾರ್ಡ್ ಆಟಗಳು) ಹಾಗೂ ಆನ್ ಲೈನ್ ಲಾಟರಿಗಳವರೆಗೆ ಎಲ್ಲಾ ಆನ್ ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಆಟಗಳನ್ನು ಈ ಮಸೂದೆ ಪ್ರಕಾರ ಕಾನೂನುಬಾಹಿರಗೊಳಿಸುತ್ತದೆ.
ಹಣದ ಲಾಭದ ಭರವಸೆ ಮೂಡಿಸುವ ಮೂಲಕ ನಮ್ಮ ಯುವಕರನ್ನು ಪ್ರಚೋದಿಸಿ, ಅವರನ್ನು ವ್ಯಸನಕಾರಿ ಆಟಗಳಿಗೆ ದೂಡಿ, ಇಡೀ ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಆನ್ ಲೈನ್ ರಿಯಲ್ ಮನಿ ಗೇಮಿಂಗ್ ಅಪ್ಲಿಕೇಶನ್ ಗಳಿಂದ ಅವರನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ.
ಆನ್ ಲೈನ್ ಮನಿ ಗೇಮಿಂಗ್ನಿಂದ ಉಂಟಾಗುವ ವ್ಯಸನ, ಆರ್ಥಿಕ ನಷ್ಟ ಮತ್ತು ಆತ್ಮಹತ್ಯೆಯಂತಹ ತೀವ್ರ ಪರಿಣಾಮಗಳನ್ನು, ಅಂತಹ ಚಟುವಟಿಕೆಗಳನ್ನು ನಿಷೇಧಿಸುವ ಮೂಲಕ ತಡೆಯಬಹುದು ಎಂದು ಸರ್ಕಾರವು ನಂಬುತ್ತದೆ. ಹೆಚ್ಚುವರಿಯಾಗಿ, ಈ ವೇದಿಕೆಗಳು ಆರ್ಥಿಕ ವಂಚನೆ, ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ದುರ್ಬಳಕೆಯಾಗುತ್ತಿವೆ.
ಇದರಿಂದಾಗಿ, ಡಿಜಿಟಲ್ ಜಗತ್ತಿನ ಕಾನೂನುಗಳನ್ನು ಭೌತಿಕ ಜಗತ್ತಿನಲ್ಲಿರುವ ಕಾನೂನುಗಳೊಂದಿಗೆ ಸಮೀಕರಿಸಿದಂತಾಗುತ್ತದೆ. ಏಕೆಂದರೆ ಭೌತಿಕ ಜಗತ್ತಿನಲ್ಲಿ ಬೆಟ್ಟಿಂಗ್ ಮತ್ತು ಜೂಜಾಟವು ಈಗಾಗಲೇ ಭಾರತೀಯ ನ್ಯಾಯ ಸಂಹಿತೆ, 2023 ಮತ್ತು ವಿವಿಧ ರಾಜ್ಯ ಸರ್ಕಾರಗಳ ಕಾನೂನುಗಳ ಪ್ರಕಾರ ನಿರ್ಬಂಧಿತ ಅಥವಾ ಶಿಕ್ಷಾರ್ಹ ಅಪರಾಧವಾಗಿದೆ.