ಬೆಂಗಳೂರು: ಸಾಮಾಜಿಕ ಜಾಲತಾಣಗಳು ಮತ್ತು ಸೈಬರ್ ತಾಣಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಬೆದರಿಕೆಗಳಿಂದ ರಕ್ಷಿಸಿಕೊಳ್ಳಲು ಹಾಗೂ ಶಕ್ತಿಯುತವಾದ ಪಾಸ್‌ವರ್ಡ್‌ಗಳನ್ನು ರೂಪಿಸುವುದು ಮತ್ತು ಮೋಸದ ಜಾಲಗಳನ್ನು ಗುರುತಿಸುವ ಸಂಬಂಧ ಅಗತ್ಯವಿರುವ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮೆಟಾ ಕಂಪೆನಿ ಜೊತೆಗೂಡಿ ೧೦ ಲಕ್ಷ ಮಕ್ಕಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಂದು ಗುರುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಡಿಜಿಟಲ್ ನಾಗರೀಕ್ ಮತ್ತು ಎಆರ್-ವಿಆರ್ ಕೌಶಲ್ಯ ಲೋಕಾರ್ಪಣೆಗೊಳಿಸಿ ಮಾತನಾಡಿ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳೊಂದಿಗೆ ಮಕ್ಕಳಿಗೆ ತರಬೇತಿ ನೀಡುವುದು ಮಾತ್ರವಲ್ಲದೆ ಅವರಲ್ಲಿ ಜಾಗರೂಕತೆ ಮತ್ತು ಜವಾಬ್ದಾರಿಯ ಮನಸ್ಥಿತಿಯನ್ನು ಹುಟ್ಟುಹಾಕಲಾಗುವುದು ಹಾಗೂ ಇದು ಮುಂದಿನ ಜೀವನದಲ್ಲಿ ಎಚ್ಚರಿಕೆಯ ಗಂಟೆಯಾಗಿ ಉಳಿಯುತ್ತದೆ ಎಂದೂ ಸಚಿವರು ಈ ಸಂದರ್ಭದಲ್ಲಿ ಹೇಳಿದರು.
ಕರ್ನಾಟಕ ಸರ್ಕಾರ ಮತ್ತು ಮೆಟಾ ಕಂಪೆನಿ ಜಂಟಿಯಾಗಿ ೨೦೨೫ರ ವೇಳೆಗೆ ರಾಜ್ಯದ ಒಂದು ಲಕ್ಷ ಶಿಕ್ಷಕರು ಮತ್ತು ೧೦ ಲಕ್ಷ ವಿದ್ಯಾರ್ಥಿಗಳನ್ನು ಡಿಜಿಟಲ್ ಸುರಕ್ಷತಾ ಜ್ಞಾನ ಮತ್ತು ವರ್ಧಿತ ವಾಸ್ತವತೆ (ಆಗ್ಯುಮೆಂಟೆಡ್ ರಿಯಾಲಿಟಿ)/ಅಗೋಚರ ವಾಸ್ತವತೆ (ವರ್ಚುವಲ್ ರಿಯಾಲಿಟಿ ) ಕೌಶಲ್ಯಗಳೊಂದಿಗೆ ಸಬಲೀಕರಣಗೊಳಿಸುವ ಮಹತ್ವಾಕಾಂಕ್ಷೆಯ ಪಯಣವನ್ನು ಪ್ರಾರಂಭಿಸಿದೆ.
ಮೆಟಾ ಕಂಪೆನಿಯ ಭಾರತದ ಪಬ್ಲಿಕ್ ಪಾಲಿಸಿಯ ಮ್ಯಾನೇಜರ್ ಪ್ರಿಯಾಂಕಾ ರಾವ್ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಈ ಮಹತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.