ಮೈಸೂರು: ಆನ್‌ಲೈನ್ ಸೇವೆಗಳು ಕಲಿತವರಿಗಷ್ಟೇ ಉಪಯುಕ್ತವಾಗಿವೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಕೆ.ಪಾಂಡು ತಿಳಿಸಿದರು.
ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ವತಿಯಿಂದ ಬುಧವಾರ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಮಕ್ಕಳಲ್ಲಿ ಶ್ರವಣೇಂದ್ರಿಯ ಪ್ರಕ್ರಿಯೆ: ಆನ್‌ಲೈನ್ ಬೋಧನೆಯ ಮಿತಿಗಳನ್ನು ಮೀರುವುದು ಎಂಬ ವಿಚಾರ ಕುರಿತು ಆಯೋಜಿಸಿರುವ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ಬಳಕೆ ಹತೋಟಿಯಲ್ಲಿರಬೇಕು. ಇಲ್ಲವಾದರೆ, ನಿಮ್ಮ ಬದುಕಿನ ಪಥ ಬದಲಾಗಬಹುದು. ಹಾಗಾಗಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳನ್ನು ಅಗತ್ಯವಿದ್ದಾಗ ಸದುಪೋಂಗ ಪಡಿಸಲು ಪ್ರೇರೇಪಿಸಬೇಕು. ನಮ್ಮ ಕೆಲಸಗಳಿಗೆ ಸಮಾಜದಿಂದ ಪ್ರತಿಫಲದ ನಿರೀಕ್ಷೆ ಇರುತ್ತದೆ. ಹಾಗಾಗಿ, ಇಂತಹ ನಿರೀಕ್ಷೆಗಳನ್ನು ಸಾಮಾಜಿಕ ಮಾಧ್ಯಮಗಳು ಹುಸಿ ಮಾಡಬಾರದು ಎಂದರು.
ಪ್ರಸ್ತುತ ಆನ್‌ಲೈನ್ ಶಿಕ್ಷಣಕ್ಕೆ ಸಮರ್ಪಕವಾದ ಪ್ರೇರಣೆಯ ಕೊರತೆಯಿದೆ. ಕೊರೊನಾ ಸಮಯದಲ್ಲಿ ವಿದ್ಯಾರ್ಥಿಗಳು ಮನೆಗಳಲ್ಲಿಯೇ ಉಳಿದು ತರಗತಿ ಮತ್ತು ಸಹಪಾಠಿಗಳಿಂದ ದೂರವಿದ್ದು, ಆನ್‌ಲೈನ್ ತರಗತಿಯಲ್ಲಿ ತೊಡಗುತ್ತಿದ್ದರು. ಈಗ ಇದಕ್ಕೆ ಪ್ರೇರಣೆಯ ಕೊರತೆ ಇದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ.ರಾಜಶೇಖರ್ ಹಾಗೂ ಶಿಕ್ಷಕರು ಹಾಜರಿದ್ದರು.