ಅಯೋಧ್ಯೆ: ಶ್ರೀರಾಮನ ಭಕ್ತರಿಗೆ ಮಾತ್ರ ರಾಮಲಲ್ಲಾ ಪ್ರತಿಷ್ಠಾಪನೆಗೆ ಆಹ್ವಾನ ನೀಡಲಾಗಿದೆ ಎಂದು ಅಯೋಧ್ಯೆಯ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ನೀಡಿದ ಹೇಳಿಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಲು ನನಗೆ ಆಹ್ವಾನದ ಅಗತ್ಯವಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದರು. ಮೊದಲನೆಯದಾಗಿ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಎರಡನೆಯದಾಗಿ ಅಲ್ಲಿಗೆ ಹೋಗಲು ನನಗೆ ಆಹ್ವಾನದ ಅಗತ್ಯವಿಲ್ಲ. ರಾಮ ಯಾವುದೇ ಪಕ್ಷದ ಆಸ್ತಿಯಲ್ಲ, ಅವರು ಎಲ್ಲರಿಗೂ ಸೇರಿದವರು. ಹೀಗಾಗಿ ಇದನ್ನು ರಾಜಕೀಯಗೊಳಿಸಬಾರದು ಎಂದು ನಾನು ಬಯಸುತ್ತೇನೆ. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನೀಡಿದೆ, ಸರ್ಕಾರವಲ್ಲ ಎಂದು ಹೇಳಿದ್ದರು.
ಈ ವಿಚಾರ ಕುರಿತು ಆಚಾರ್ಯರು ಪ್ರತಿಕ್ರಿಯೆ ನೀಡಿದ್ದು, ರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ. ಪ್ರಧಾನಿ ಮೋದಿ ಪ್ರತಿ ಸ್ಥಳವನ್ನೂ ಗೌರವಿಸುತ್ತಾರೆ. ಇದು ರಾಜಕೀಯವಲ್ಲ ಅವರ ಭಕ್ತಿ ಎಂದು ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರದಲ್ಲಿ ಶಂಕುಸ್ಥಾಪನೆ ಸಮಾರಂಭವು ಜನವರಿ 16 ರಿಂದ ಏಳು ದಿನಗಳ ಕಾಲ ನಡೆಯಲಿದೆ. ಅಯೋಧ್ಯೆಯಲ್ಲಿ ರಾಮ ಲಲ್ಲಾ ಪಟ್ಟಾಭಿಷೇಕಕ್ಕೆ ಸಿದ್ಧತೆ ಆರಂಭವಾಗಿದೆ. ಜನವರಿ 22 ರಂದು ಶ್ರೀರಾಮ ಮಂದಿರ ಉದ್ಘಾಟನೆ ನೆರವೇರಲಿದೆ. ಈ ಪೂಜೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿರುತ್ತಾರೆ. ಜನವರಿ 22 ರಂದು ಬೆಳಗ್ಗೆಯ ಪೂಜೆ ಬಳಿಕ ರಾಮಲಲ್ಲಾನ ಪ್ರತಿಷ್ಠಾಪನೆ ಕಾರ್ಯ ಮೃಗಶಿರ ನಕ್ಷತ್ರದಲ್ಲಿ ನೆರವೇರಲಿದೆ.