Saturday, April 12, 2025
Google search engine

HomeUncategorizedರಾಷ್ಟ್ರೀಯಶಬರಿಮಲೆ ಯಾತ್ರೆಗೆ ಆನ್‌ಲೈನ್‌ ಬುಕ್ಕಿಂಗ್‌ ಮಾಡಿದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ

ಶಬರಿಮಲೆ ಯಾತ್ರೆಗೆ ಆನ್‌ಲೈನ್‌ ಬುಕ್ಕಿಂಗ್‌ ಮಾಡಿದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ

ತಿರುವನಂತಪುರಂ: ಶಬರಿಮಲೆಯಲ್ಲಿ ನವೆಂಬರ್‌ನಿಂದ ಪ್ರಾರಂಭವಾಗುವ ಎರಡು ತಿಂಗಳ ಮಂಡಲಂ-ಮಕರವಿಳಕ್ಕು ತೀರ್ಥಯಾತ್ರಾ ಹಿನ್ನೆಲೆ ಈ ವರ್ಷ ಆನ್‌ಲೈನ್‌ ಬುಕ್ಕಿಂಗ್‌ ಮಾಡಿದವರಿಗೆ ಮಾತ್ರ ಶಬರಿಮಲೆ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಕೇರಳ ಸರ್ಕಾರ ತಿಳಿಸಿದೆ.

ಅಯ್ಯಪ್ಪ ದೇಗುಲದಲ್ಲಿ ದಿನಕ್ಕೆ ಗರಿಷ್ಠ 80,000 ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಮುಂಬರುವ ತೀರ್ಥಯಾತ್ರೆಯ ಸಿದ್ಧತೆಗಳ ಅವಲೋಕನದ ಮೌಲ್ಯಮಾಪನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಾಂಪ್ರದಾಯಿಕ ಅರಣ್ಯ ಮಾರ್ಗದಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಜನಸಂದಣಿಯ ಸಮಯದಲ್ಲಿ ವಾಹನಗಳನ್ನು ನಿಯಂತ್ರಿಸಬೇಕಾದರೆ, ಪಾರ್ಕಿಂಗ್‌ಗೆ ಅಗತ್ಯ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಲಕ್ಷಾಂತರ ಭಕ್ತರು ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ್ದರಿಂದ ಅದನ್ನು ನಿರ್ವಹಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಿದ್ದರಿಂದ ಅವ್ಯವಸ್ಥೆ ಉಂಟಾಗಿತ್ತು. ಇದರಿಂದ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ವರ್ಷ ಭಕ್ತರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಆನ್‌ಲೈನ್‌ ಬುಕ್‌ ಮಾಡಿದವರಿಗೆ ಮಾತ್ರ ಅವಕಾಶ ಕಲ್ಪಿಸಲು ಸರ್ಕಾರ ತೀರ್ಮಾನಿಸಿದೆ.

ಈ ಬಾರಿ ನಿಲಕ್ಕಲ್ ಮತ್ತು ಪಂಪಾದಲ್ಲಿ ಹೆಚ್ಚಿನ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ‘ವಿಶುಧಿ ಸೇನಾ’ ಸ್ವಯಂಸೇವಕರಿಗೆ (ಸ್ವಚ್ಛತಾ ಸ್ವಯಂಸೇವಕರು) ಆರೋಗ್ಯ ತಪಾಸಣೆ ಮತ್ತು ತರಬೇತಿಯನ್ನೂ ಏರ್ಪಡಿಸಲಾಗುವುದು. ಶಬರಿಮಲೆಯ ಶಬರಿ ಅತಿಥಿಗೃಹದ ನಿರ್ವಹಣೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಪ್ರಣವಂ ಅತಿಥಿ ಗೃಹದ ನವೀಕರಣ ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಲಾಗಿದೆ.

RELATED ARTICLES
- Advertisment -
Google search engine

Most Popular