ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಹೊರ ಪೊಲೀಸ್ ಠಾಣೆ, ಆಸ್ಪತ್ರೆ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಪೊಲೀಸ್ ಠಾಣೆಗಳ ಸರಹದ್ದನ್ನು ವಿಸ್ತರಿಸುವಂತೆ ಸಿ.ಎಂ ಗೃಹ ಸಚಿವರಿಗೆ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದ್ದಾರೆ.
ಚಾಮುಂಡಿಬೆಟ್ಟಕ್ಕೆ ಪ್ರತಿ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಆಷಾಢ ಮಾಸ ಹಾಗೂ ನವರಾತ್ರಿ ಸಂದರ್ಭದಲ್ಲಿ ಹೊರ ರಾಜ್ಯ, ದೇಶ, ವಿದೇಶಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ. ಭಕ್ತಾಧಿಗಳ ದಟ್ಟಣೆಯಿಂದ ಸೂಕ್ತ ನಿಯಂತ್ರಣವಿಲ್ಲದೆ ಸುಗಮವಾಗಿ ದೇವಿಯ ದರ್ಶನ ಪಡೆಯಲು ಅನಾನುಕೂಲವಾಗುತ್ತಿದೆ. ದೇವಿಯ ದರ್ಶನಕ್ಕೆ ಹಿರಿಯ ನಾಗರಿಕರು ಹಾಗೂ ಸರ್ಕಾರದ ಶಕ್ತಿ ಯೋಜನೆ ಮೂಲಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಶೀಘ್ರದಲ್ಲೇ ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರಾರಂಭವಾಗುತ್ತಿರುವುದರಿಂದ ಭಕ್ತಾಧಿಗಳ ದಟ್ಟಣೆಯನ್ನು ನಿಯಂತ್ರಿಸಲು ಅನುಕೂಲವಾಗುವಂತೆ ಹೊರ ಪೊಲೀಸ್ ಠಾಣೆ ತೆರೆಯುವಂತೆ ಹಾಗೂ ಭಕ್ತಾಧಿಗಳ ಆರೋಗ್ಯ ದೃಷ್ಠಿಯಿಂದ ಬೆಟ್ಟದಲ್ಲಿ ಆಸ್ಪತ್ರೆ ಹಾಗೂ ಆಂಬುಲೆನ್ಸ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸುವಂತೆ ಸಿ.ಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮೈಸೂರು ನಗರ ವ್ಯಾಪ್ತಿಗೆ ಹಾಗೂ ಗ್ರಾಮೀಣ ಪ್ರದೇಶ ಹೊಂದಿದ್ದು, ಪೊಲೀಸ್ ಠಾಣೆಗಳ ಸರದ್ದನ್ನು ಬದಲಾವಣೆ ಮಾಡುವ ಬಗ್ಗೆ ಹಾಗೂ ಕೆಲವೊಂದು ಠಾಣೆಗಳ ಸರದ್ದನ್ನು ವಿಸ್ತರಿಸುವುದು ಅವಶ್ಯಕವಾಗಿದ್ದು ಠಾಣೆಗಳ ಸರಹದ್ದನ್ನು ವಿಸ್ತರಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಲ್ಲಿ ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.
ಕ್ಷೇತ್ರದಲ್ಲಿ ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ಬೋಗಾದಿ, ರಮ್ಮನಹಳ್ಳಿ ಹಾಗೂ ಕಡಕೊಳ ಪಟ್ಟಣ ಪಂಚಾಯಿತಿಗಳು ಹಾಗೂ ೧೮ ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರು ನಗರದ ವ್ಯಾಪ್ತಿಯಲ್ಲಿ ೧೭ ಪೊಲೀಸ್ ಠಾಣೆಗಳು ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ೩ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಜಯಪುರ ಪೊಲೀಸ್ ಠಾಣೆ ಮೈಸೂರಿನ ರಿಂಗ್ ರಸ್ತೆಯಿಂದ ೧೫ ಕಿ.ಮೀ. ದೂರದಲ್ಲಿರುತ್ತದೆ. ಸದರಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ ಗ್ರಾಮಗಳು ಜಯಪುರ ಪೊಲೀಸ್ ಠಾಣೆಯಿಂದ ೨೦ ಕಿ.ಮೀ ದೂರದಲ್ಲಿದೆ. ಆದರೆ, ಬೋಗಾದಿ ಗ್ರಾಮ ಸರಸ್ವತಿಪುರಂ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿರುತ್ತದೆ. ಬೋಗಾದಿಗೆ ಹೊಂದಿಕೊಂಡಂತೆ ಇರುವ ದಾಸನಕೊಪ್ಪಲು ಗ್ರಾಮ ಜಯಪುರಕ್ಕೆ ಠಾಣೆ ವ್ಯಾಪ್ತಿಗೆ ಸೇರಿದ್ದು, ಗ್ರಾಮದ ಪರಿಮಿತಿಯಲ್ಲಿ ಹಲವಾರು ಬಡಾವಣೆಗಳು ನಿರ್ಮಾಣಗೊಂಡಿದ್ದು, ಪೊಲೀಸ್ ಗಸ್ತು ಕಡಿಮೆ ಇರುವುದರಿಂದ ಕಳ್ಳತನ ಹೆಚ್ಚಾಗಿ ನಡೆಯುತ್ತಿರುವ ಪ್ರಕರಣಗಳು ಕಂಡು ಬರುತ್ತಿರುವುದರಿಂದ ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ ಗ್ರಾಮಗಳನ್ನು ಸರಸ್ವತಿಪುರಂ ಠಾಣೆ ವ್ಯಾಪ್ತಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.