ಬೆಳಗಾವಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಾರತೀಯರ ಹತ್ಯಾಕಾಂಡದ ಪ್ರತೀಕಾರವಾಗಿ ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಹೆಸರಿನ ಏರ್‌ಸ್ಟ್ರೈಕ್ ಮಾಡಿತ್ತು. ‘ಆಪರೇಷನ್ ಸಿಂಧೂರ್’ ಕಾರ್ಯಚರಣೆಯ ಬಳಿಕ ದಾಳಿಯ ಕುರಿತು ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಶಿಯವರು ಕರ್ನಾಟಕದ ಬೆಳಗಾವಿಯ ಸೊಸೆ ಎನ್ನಲಾಗಿದೆ.
ಕರ್ನಲ್ ಸೋಫಿಯಾ ಖುರೇಶಿ ಅವರ ಪತಿ ತಾಜುದ್ದೀನ್ ಬಾಗೇವಾಡಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ನಿವಾಸಿಯಾಗಿದ್ದಾರೆ. ಗುಜರಾತ್ ರಾಜ್ಯದ ವಡೋದರದವರಾದ ಖುರೇಶಿ, 2015ರಲ್ಲಿ ತಾಜುದ್ದೀನ್ ಅವನ್ನು ಪ್ರೇಮ ವಿವಾಹವಾಗಿದ್ದರು. ಪತಿ ತಾಜುದ್ದೀನ್ ಬಾಗೇವಾಡಿ ಹಾಗೂ ಪತ್ನಿ ಸೋಫಿಯಾ ಖುರೇಶಿ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.
ಬೆಳಗಾವಿಯ ಸೊಸೆಯಾಗಿರುವ ಖುರೇಶಿ ಈಗ ಭಾರತದ ಹೆಮ್ಮೆಯ ಪುತ್ರಿ. ಅಲ್ಲದೇ ಕರ್ನಲ್ ಸೋಫಿಯಾ ಖುರೇಶಿ, ಬಹುರಾಷ್ಟ್ರೀಯ ಸೇನಾ ತುಕಡಿ ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.