ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿದ್ದು ನಾಳೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮಂದಿರದ ನಿರ್ಮಾಣ ಮೇಲ್ವಿಚಾರಣೆ ನಡೆಸುತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ. ಆದ್ದರಿಂದ ಭಕ್ತರಿಗೆ ಬಾಲರಾಮನ ದರ್ಶನಕ್ಕಾಗಿ ಎರಡು ಅವಧಿಯನ್ನು ನಿಗದಿಪಡಿಸಲಾಗಿದ್ದು, ಮೊದಲ ಅವಧಿಯು ಬೆಳಿಗ್ಗೆ 7:00ರಿಂದ 11:30ವರೆಗೆ ಮತ್ತು ಎರಡನೇ ಅವಧಿಯು ಮಧ್ಯಾಹ್ನ 2 ಗಂಟೆಯಿಂದ ಸಂಜೆ 7:00 ವರೆಗೆ ನಿಗದಿಪಡಿಸಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ .
ನಿತ್ಯ ಸಂಜೆ 6:30ಕ್ಕೆ ವಿಶೇಷ ಭಜನೆ ಶೃಂಗಾರ ಆರತಿ ಕಾರ್ಯಕ್ರಮ ನಡೆಯಲಿದ್ದು, ಒಂದು ದಿನ ಮೊದಲೇ ಭಕ್ತರು ತಮ್ಮ ಸ್ಥಾನವನ್ನು ಕಾಯ್ದಿರಿಸಬೇಕು ಎಂದು ಅವರು ತಿಳಿಸಿದ್ದಾರೆ. ಸಂಜೆ ಏಳು ಗಂಟೆಗೆ ಬಾಲರಾಮನಿಗೆ ಆರತಿ ನೆರವೇರಲಿದ್ದು, ಆರತಿ ದರ್ಶನಕ್ಕೆ ಬರುವ ಭಕ್ತರು ಟ್ರಸ್ಟ್ ಕಚೇರಿಯಲ್ಲಿ ಮುಂಚಿತವಾಗಿ ಪಾಸ್ ಪಡೆದಿರಬೇಕು ಎಂದೂ ಅವರು ಹೇಳಿದ್ದಾರೆ.