ಬೆಂಗಳೂರು: ರವೀಂದ್ರ ಕಲಾಕ್ಷೇತ್ರವನ್ನು ೨೪ ಕೋಟಿ ವೆಚ್ಚದಲ್ಲಿ ನವೀಕರಿಸುವ ಪ್ರಸ್ತಾವಕ್ಕೆ ರಂಗಕರ್ಮಿಗಳು, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರಿಂದ ವಿರೋಧವ್ಯಕ್ತವಾದ್ದರಿಂದ ಸದ್ಯ ಈ ಪ್ರಸ್ತಾವ ಕೈಬಿಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಿರ್ಧರಿಸಿದೆ. ಈ ಬಗ್ಗೆ ರಂಗಕರ್ಮಿಗಳ ಜತೆಗೆ ಸಭೆ ನಡೆಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ರವೀಂದ್ರ ಕಲಾಕ್ಷೇತ್ರದ ನವೀಕರಣವನ್ನು ಕೈಬಿಟ್ಟು ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ನವೀಕರಣ ಪ್ರಸ್ತಾಪಕ್ಕೆ ರಂಗಕರ್ಮಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ವಿರೋಧ ವ್ಯಕ್ತಪಡಿಸಿ, ಸಮಗ್ರ ನವೀಕರಣ ಅನಗತ್ಯವೆಂದು ಪ್ರತಿಪಾದಿಸಿದ್ದರು. ಸಾಹಿತಿ ಕೆ.ಮರುಳಸಿದ್ದಪ್ಪ ಅವರು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದರು. ಹೀಗಾಗಿ, ಶಿವರಾಜ್ ತಂಗಡಗಿ ಅವರು ರಂಗಕರ್ಮಿಗಳ ಜತೆಗೆ ಸಭೆ ನಡೆಸಿ, ನವೀಕರಣದ ಬಗ್ಗೆ ಚರ್ಚೆ ನಡೆಸಿದ್ದಾರೆ.
೨೪ ಕೋಟಿ ವೆಚ್ಚದಲ್ಲಿ ಕಲಾಕ್ಷೇತ್ರದ ನವೀಕರಣ ಅಗತ್ಯವಿಲ್ಲ. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಅನಿವಾರ್ಯವಲ್ಲ. ನವೀಕರಣ ಬಳಿಕ ಬಾಡಿಗೆ ಹೆಚ್ಚಿಸಲಾಗುತ್ತದೆ. ಅದನ್ನು ಭರಿಸಿ, ನಾಟಕ ಪ್ರದರ್ಶಿಸುವ ಶಕ್ತಿ ರಂಗಭೂಮಿಗಿಲ್ಲ. ಬದಲಾಗಿ, ಕೆಟ್ಟಿರುವ ಧ್ವನಿ,ಬೆಳಕಿನ ಪರಿಕರಗಳ ರಿಪೇರಿಗೆ ಕ್ರಮವಹಿಸಬೇಕು. ವೇದಿಕೆ ಮೇಲೆ ಹಾಕಲು ಆಲಂಕಾರಿಕ ಕುರ್ಚಿಗಳನ್ನು ನೀಡಬೇಕು. ವಾರ್ಷಿಕ ಶೇ ೫ರಷ್ಟು ಬಾಡಿಗೆ ಹೆಚ್ಚಳ ಕೈಬಿಟ್ಟು, ಅಗತ್ಯ ಸಿಬ್ಬಂದಿ ನೇಮಿಸಬೇಕು’ ಎಂದು ರಂಗಕರ್ಮಿಗಳು ತಿಳಿಸಿದರು.
ನನ್ನ ಅಧಿಕಾರವಧಿಯಲ್ಲಿ ಹೆಸರು ಉಳಿಯುವ ಕೆಲಸ ಮಾಡಬೇಕೆನ್ನುವುದು ಈ ಯೋಜನೆಯ ಉದ್ದೇಶವಾಗಿತ್ತು. ವಿರೋಧದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಟ್ಟು, ಕಲಾಕ್ಷೇತ್ರವನ್ನು ಯಥಾಸ್ಥಿತಿಯಲ್ಲಿ ಬಿಡುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.