ವರದಿ: ಸ್ಟೀಫನ್ ಜೇಮ್ಸ್
ಬೆಂಗಳೂರು : ನಾಡಹಬ್ಬ ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಇದನ್ನ ವಿರೋಧಿಸಿ, ಹೈಕೋರ್ಟ್‌ಗೆ ಮತ್ತೆರಡು ಪಿಐಎಲ್ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ತಮ್ಮ ಆಹ್ವಾನ ಹಿಂಪಡೆಯುವಂತೆ ಸೂಚಿಸಲು ಮನವಿ ಮಾಡಿ, ಮಾಜಿ ಸಂಸದ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿದ್ರು. ಇದೀಗ ಪ್ರತ್ಯೇಕವಾಗಿ 2 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ.
ಸೆಪ್ಟೆಂಬರ್ 10ರಂದು ಬೆಂಗಳೂರಿನ ನಿವಾಸಿ ಎಚ್.ಎಸ್.ಗೌರವ್ ಅರ್ಜಿ ಸಲ್ಲಿಸಿದ್ದಾರೆ. ಹಿಂದೂ ಅಲ್ಲದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ನಿರ್ಧಾರವನ್ನು, ವಾಪಸ್ ಪಡೆಯುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ. ಅದೇ ರೀತಿ ದಸರಾ ಉದ್ಘಾಟನೆಯು ಹಿಂದೂ ಧಾರ್ಮಿಕ ಸಂಪ್ರದಾಯದ ಅವಿಭಾಜ್ಯ ಭಾಗವೆಂದು ಘೋಷಿಸಿ. ನಾಡಹಬ್ಬ ದಸರಾವನ್ನು ಹಿಂದೂ ಗಣ್ಯರಿಂದಲೇ ಉದ್ಘಾಟಿಸಬೇಕು. ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ, ಹಿಂದೂ ಆಗಮಿಕ ಪದ್ಧತಿ ಪ್ರಕಾರವೇ ಆಚರಣೆಗೆ, ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಬೆಂಗಳೂರಿನ ಉದ್ಯಮಿ ಟಿ.ಗಿರೀಶ್ ಕುಮಾರ್ ಹಾಗೂ ಅಭಿನವ ಭಾರತ್ ಪಾರ್ಟಿಯ ರಾಷ್ಟ್ರೀಯ ಉಪಾಧ್ಯಕ್ಷೆ ಆರ್. ಸೌಮ್ಯ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಬಾನು ಮುಷ್ತಾಕ್‌ಗೆ ದಸರಾ ಉದ್ಘಾಟಕರ ಗೌರವ ನೀಡಿದ್ದನ್ನ ವಿರೋಧಿಸಿ, ನ್ಯಾಯಾಲಯಕ್ಕೆ ಒಟ್ಟು 3 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲಾ ಅರ್ಜಿಗಳ ವಿಚಾರಣೆ ಇನ್ನಷ್ಟೇ ನಡೆಸಬೇಕಿದೆ.
ಕನ್ನಡ ಭಾಷೆ, ಕನ್ನಡ ಬಾವುಟ ಕುರಿತಂತೆ 2023ರಲ್ಲಿ, ಬಾನು ಮುಷ್ತಾಕ್ ಮಾಡಿದ್ದ ಭಾಷಣ ಹಾಗೂ ಅದರಲ್ಲಿರುವ ಆಕ್ಷೇಪಾರ್ಹ ಸಂಗತಿಗಳು, 2025ರಲ್ಲಿ ಮುನ್ನಲೆಗೆ ಬಂದಿವೆ. ದಸರಾ ಉದ್ಘಾಟಕರನ್ನಾಗಿ ಬಾನು ಅವ್ರನನ್ನ ಆಯ್ಕೆ ಮಾಡಿದ ಬಳಿಕ, ಹಳೆ ವಿಡಿಯೋ ಭಾರೀ ವೈರಲ್ ಆಗಿತ್ತು. 2023ರಲ್ಲಿ ಹಾಸನದಲ್ಲಿ ನಡೆದಿದ್ದ ಜನಸಾಹಿತ್ಯ ಸಮ್ಮೇಳನದಲ್ಲಿ, ಬಾನು ಮುಷ್ತಾಕ್ ಭಾಗಿಯಾಗಿದ್ರು. ಆ ವೇಳೆ ಕನ್ನಡ ಭಾಷೆಗೆ ಭುವನೇಶ್ವರಿ ಎಂಬ ತಾಯಿಯ ಸ್ವರೂಪ ಕೊಟ್ಟು, ಹಿಂದೂಗಳು ಶುಭಕಾರ್ಯಗಳಿಗೆ ಬಳಸುವ ಅರಿಶಿನ, ಕುಂಕುಮದ ಬಣ್ಣಗಳನ್ನೇ ಬಳಸಿ ಬಾವುಟ ಮಾಡಿದ್ದು ವಿಪರ್ಯಾಸ. ಅಂಥ ಬಣ್ಣ ಹಾಗೂ ಭುವನೇಶ್ವರಿಯನ್ನು ರೂಪಿಸುವ ಮೂಲಕ, ಅಲ್ಪಸಂಖ್ಯಾತರನ್ನು ಕನ್ನಡ ಸೇವೆಯಿಂದ ದೂರವಿರುವ ಷಡ್ಯಂತ್ರ ಮಾಡಲಾಗಿತ್ತು ಅಂತಾ ಹೇಳಿದ್ದಾರೆ.