ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ, ದೇಶದ ಪ್ರಮುಖ ಹತ್ತು ಟ್ರೇಡ್ ಯೂನಿಯನ್ಗಳು ಜುಲೈ 9 ರಂದು ಭಾರತ ಬಂದ್‌ಗೆ ಕರೆ ನೀಡಿದ್ದಾರೆ. ಈ ಬಂದ್‌ನಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು ಭಾಗವಹಿಸುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ.
ಬ್ಯಾಂಕ್, ವಿಮೆ, ಪೋಸ್ಟ್, ಗಣಿ ಸಂಸ್ಥೆಗಳು, ಖಾಸಗಿ ಸಾರಿಗೆ ಕ್ಷೇತ್ರಗಳಲ್ಲಿ ಸೇವೆ ವ್ಯತ್ಯಯವಾಗುವ ಸಾಧ್ಯತೆಯಿದೆ. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರಜೀತ್ ಕೌರ್ ಅವರು ಕೇಂದ್ರ ಸರ್ಕಾರವು ಕಾರ್ಮಿಕರ ಬೇಡಿಕೆಗಳನ್ನು ಅನುಸರಿಸದೇ, ಕಾರ್ಪೊರೇಟ್ ಕಂಪನಿಗಳಿಗೆ ಬೆಂಬಲ ನೀಡುತ್ತಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ. ಕಳೆದ ವರ್ಷ ಕಾರ್ಮಿಕ ಸಚಿವರಿಗೆ ಸಲ್ಲಿಸಲಾದ 17 ಬೇಡಿಕೆಗಳು ಈವರೆಗೂ ಈಡೇರಿಲ್ಲ ಎಂಬ ಕಾರಣದಿಂದಲೇ ಈ ಪ್ರತಿಭಟನೆ ನಡೆಯುತ್ತಿದೆ.
ಸರ್ಕಾರ ಖಾಸಗೀಕರಣವನ್ನು ನಿಲ್ಲಿಸಬೇಕು, ಸಾರ್ವಜನಿಕ ವಲಯದಲ್ಲಿ ನೇಮಕಾತಿ ಹೆಚ್ಚಿಸಬೇಕು, ಕಾರ್ಮಿಕ ಕೂಲಿ ಹೆಚ್ಚಳ, ಬೆಲೆ ಏರಿಕೆ ನಿಯಂತ್ರಣ, ಆರೋಗ್ಯ–ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ಈ ಹೋರಾಟದ ಪ್ರಮುಖ ಆಗ್ರಹಗಳು.
ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ಸುಗಳು ಎಂದಿನಂತೆ ಓಡಲಿವೆ. ಆದರೆ ಕೆಲ ಖಾಸಗಿ ಬಸ್‌ಗಳು ಮತ್ತು ಟ್ಯಾಕ್ಸಿಗಳು ಬಂದ್ ಬೆಂಬಲಿಸುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳಿಗೆ ಕೆಲವು ಸಮಸ್ಯೆಗಳು ಉಂಟಾಗಬಹುದು. ಶಾಲೆ–ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.