ಮೈಸೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅವೈeನಿಕವಾಗಿ ವಿದ್ಯುತ್ ಬಿಲ್ ನೀಡುತ್ತಿರುವುದನ್ನು ವಿರೋಧಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರ ಮಾತೃಮಂಡಳಿ ವೃತ್ತದಲ್ಲಿರುವ ವಿವಿ ಮೊಹಲ್ಲಾ ಸೆಸ್ಕ್ ವಿಭಾಗ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಎಂಬ ಭರವಸೆ ನೀಡಿ, ರಾಜ್ಯದ ಜನತೆಗೆ ವಿದ್ಯುತ್ ಬಿಲ್ ಅನ್ನು ದುಪ್ಪಟ್ಟು ಅಂದರೆ ಎರಡು ಪಟ್ಟು ಹೆಚ್ಚಿಸಿದೆ. ಇದು ರಾಜ್ಯದ ಜನತೆಗೆ ಮಾಡಿರುವ ಮಹಾದ್ರೋಹವಾಗಿದೆ. ಇತ್ತೀಚೆಗಷ್ಟೆ ಕೊರೊನಾ ವೈರಸ್‌ನಿಂದ ನಿಧಾನವಾಗಿ ಜೀವನವನ್ನು ಸುಧಾರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಬಿಲ್ ಶಾಕ್ ನೀಡಲಾಗಿದೆ. ಇದು ಬಡವರು, ಸಾಮಾನ್ಯ ವರ್ಗದವರು, ರೈತರು, ಕೂಲಿ ಕಾರ್ಮಿಕರು ಹಾಗೂ ಕೈಗಾರಿಕೆಗಳಿಗೆ ಮಾಡಿರುವ ಅನ್ಯಾಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೆ ಈಗ ನೀಡಿರುವ ಅವೈಜ್ಞಾನಿಕ ವಿದ್ಯುತ್ ಬಿಲ್ ಅನ್ನು ವಾಪಸ್ ಪಡೆದು ಮರು ಪರಿಶೀಲಿಸಿ, ವಿದ್ಯುತ್ ಬಿಲ್ ಮನ್ನಾ ಮಾಡಿ ಬಡವರನ್ನು ಉಳಿಸಬೇಕು. ಹಾಗೆಯೇ, ಈ ಹಿಂದೆ ಸೋಲಾರ್ ಸಿಸ್ಟಮ್ ಅಳವಡಿಸಿದರೆ ನೀಡುತ್ತಿದ್ದ ಸಬ್ಸಿಡಿ ತೆಗೆದಿರುವುದು ಖಂಡನೀಯ. ಈ ಕೂಡಲೇ ಸೋಲಾರ್ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.
ನಗರ ಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು, ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ಮುದ್ದುರಾಜ್, ಮುಖಂಡರಾದ ಸತೀಶ್, ಕೃಷ್ಣಾಚಾರ್, ಲಕ್ಷ್ಮೀ, ಹೇಮಾವತಿ, ರಘು, ರಾಜು, ಹನುಮೇಗೌಡ, ಮಹದೇವ್, ಅರುಣ್ ಮೊದಲಾದವರು ಇದ್ದರು.