ಮೈಸೂರು:ಭಾರತದಲ್ಲಿ ಮೊದಲ ಬಾರಿಗೆ ಸ್ವಚ್ಛತೆ ಹಾಗೂ ಸಂಸ್ಕೃತಿಯ ತವರಾದ ನಮ್ಮ ಮೈಸೂರಿನಲ್ಲಿ ಓರಲ್ ಕೇರ್ ಮರುಬಳಕೆ ಕೇಂದ್ರವನ್ನು ಅಕ್ಟೋಬರ್ 30 ರಂದು ಕುವೆಂಪು ನಗರದ ವಿಶ್ವಮಾನವ ರಸ್ತೆಯ ಸ್ಮೈಲ್ ಡೆಂಟಲ್ ಕೇರ್ ಪಕ್ಕದಲ್ಲಿ ಜನಬಳಕೆಗಾಗಿ ಪರಮಪೂಜ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ,ಅವಧೂತದತ್ತ ಪೀಠ ಹಾಗೂ ಮೇಯರ್ ಶಿವಕುಮಾರ್ ರವರು ಉದ್ಘಾಟಿಸಿದರು. ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಎಕ್ಸ್ಪರ್ಟ್ ಚಿದಂಬರ್ ಬಿ.ಎಸ್, ಸಂಶೋಧಕ ನಾಗೇಂದ್ರ ಶೆಟ್ಟಿ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.
ಡಾ. ಭರತ್ ಗಾರ್ಲಾ ರವರು ಕನಸು ಕಂಡಂತೆ ಉಪಯೋಗಿಸಿದ ಹಳೆಯ ಪ್ಲಾಸ್ಟಿಕ್ ಬ್ರಷ್, ಟೂತ್ ಪೇಸ್ಟ್ ಟ್ಯೂಬ್ , ಪ್ಲಾಸ್ಟಿಕ್ ಪ್ಲಾಸ್ ಟಿಪ್ ಇರಿಗೇಟರ್ ಗಳನ್ನು ಮರುಬಳಕೆ ಮಾಡಿ ಫುಟ್ಪಾತ್ ಪೇವರ್ ಗಳನ್ನು ತಯಾರಿಸಲಾಗುತ್ತಿದೆ. ಈ ಪ್ಲಾಸ್ಟಿಕ್ ಬ್ರಷ್ ಗಳನ್ನು ಎಲ್ಲೆಂದರಲ್ಲಿ ಎಸೆದಾಗ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ ಪರಿಸರ ಸ್ನೇಹಿ ಟೂತ್ ಬ್ರಷ್ ಗಳನ್ನು ಉಪಯೋಗಿಸಲು ಜನರಿಗೆ ಓರಾ ಸೈಕಲ್ ಪ್ರೇರೇಪಿಸುತ್ತದೆ.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕಿರಿಯ ಶ್ರೀಗಳು ಮಾತನಾಡಿ ಮಾನವ ತನ್ನ ಕೃತ್ರಿಮದಿಂದ ಭೂಮಿಯನ್ನು ಹಾಳು ಮಾಡದೆ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು. ಪ್ಲಾಸ್ಟಿಕಾಸುರನ ದುಷ್ಪರಿಣಾಮಗಳನ್ನು ತಿಳಿಸಿ, ಜನರಿಗೆ ಜವಾಬ್ದಾರಿಯುತವಾಗಿ ನಡೆಯಲು ಸ್ಪೂರ್ತಿ ತುಂಬಿದರು.
13 ಲಕ್ಷ ಜನಸಂಖ್ಯೆಯುಳ್ಳ ಮೈಸೂರು ಒಂದು ವರ್ಷಕ್ಕೆ 60 ಟನ್ ಟೂತ್ ಬ್ರಷ್ ಪೇಸ್ಟನ್ನು ಎಸೆಯುತ್ತಿದೆ. ಆದ್ದರಿಂದ ಡಾ|| ಭರತ್ ಗಾರ್ಲಾ ಮತ್ತು ಡಾ|| ಪ್ರತಿಭಾ ಗಾರ್ಲಾರವರು ಓರಾ ಸೈಕಲ್‌ನಲ್ಲಿ ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ಎಲ್ಲ ಜನಸಾಮಾನ್ಯರು, ಶಾಲಾ ಮಕ್ಕಳು, ವಿವಿಧ ಸಂಘ-ಸಂಸ್ಥೆಗಳು ಅವರವರ ಜವಾಬ್ದಾರಿ ಅರಿತು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.