Friday, January 30, 2026
Google search engine

Homeರಾಜ್ಯಬಸ್ ಹಾಗೂ ಬಸ್ ನಿಲ್ದಾಣಗಳಿಂದ ತಂಬಾಕು ಜಾಹೀರಾತು ತೆರವುಗೆ ಆದೇಶ

ಬಸ್ ಹಾಗೂ ಬಸ್ ನಿಲ್ದಾಣಗಳಿಂದ ತಂಬಾಕು ಜಾಹೀರಾತು ತೆರವುಗೆ ಆದೇಶ

ಬೆಂಗಳೂರು : ಸರ್ಕಾರಿ ಬಸ್​ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಮುದ್ರಿಸುವ ಮೂಲಕ ಸಾರಿಗೆ ಸಂಸ್ಥೆಗಳು ಆದಾಯದ ವ್ಯಾಮೋಹಕ್ಕೆ ಒಳಗಾಗಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಪ್ರತಿಯೊಂದು ಸರ್ಕಾರಿ ಬಸ್​​ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತುಗಳು ರಾರಾಜಿಸುತ್ತಿದ್ದವು. ಈ ಬಗ್ಗೆ ಕನ್ನಡ ಸಂಘಟನೆಗಳು ಸೇರಿದಂತೆ ಜನರು ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ಸರ್ಕಾರಿ ಬಸ್​ಗಳ ಮೇಲಿನ ಜಾಹೀರಾತು ತೆಗೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಲ್ಕು ನಿಗಮಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಆದಾಯ ಹೆಚ್ಚಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಸಾರಿಗೆ ಬಸ್‌ಗಳ ಮೇಲೂ ಜಾಹೀರಾತುಗಳನ್ನು ಅಳವಡಿಸಲಾಗಿತ್ತು. ಅವುಗಳಲ್ಲಿ ಕೆಲವು ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತುಗಳಾಗಿದ್ದವು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪರಿಣಾಮವಾಗಿ, ಹಲವು ಕಡೆಗಳಲ್ಲಿ ಬಸ್‌ಗಳ ಮೇಲಿದ್ದ ಜಾಹೀರಾತುಗಳನ್ನು ಜನರು ಕಿತ್ತು ಹಾಕಿದ್ದ ಘಟನೆಗಳು ನಡೆದಿದ್ದವು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 4 ನಿಗಮದ ಎಂಡಿಗಳಿಗೆ ತಂಬಾಕು ಉತ್ಪನ್ನಗಳ ಜಾಹೀರಾತು ಪ್ರಚಾರ ಮಾಡದಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಾರಿಗೆ ನಿಗಮದ ಬಸ್​ಗಳಲ್ಲಿ ಹಾಗೂ ಬಸ್​ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು ಕೂಡಲೇ ತೆಗೆದುಹಾಕುವಂತೆ ಸೂಚಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ ಸಂಸ್ಥೆಯ ಬಸ್​​ಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಇನ್ನು ಮುಂದೆ ಪ್ರಚಾರ ಮಾಡದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ಈಗಾಗಲೇ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಬಸ್​​​ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದರೆ ಅದನ್ನು ತೆಗೆಯಲು ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ, ಆ ನಿಗದಿತ ಸಮಯದೊಳಗೆ ಸದರಿ ಜಾಹೀರಾತುಗಳನ್ನು ತೆಗೆದು ಹಾಕುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡುವಂತೆ ಸೂಚಿಸಿದ್ದಾರೆ.

RELATED ARTICLES
- Advertisment -
Google search engine

Most Popular