ಮಂಡ್ಯ:ತಮಿಳುನಾಡಿಗೆ ಮತ್ತೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇಂದು (ಸೋಮವಾರ) ಆದೇಶಿಸಿರುವ ಹಿನ್ನೆಲೆ ಮಂಡ್ಯದಲ್ಲಿ ಮತ್ತೆ ರೈತರಿಂದ ಕಾವೇರಿ ಕಿಚ್ಚು ಭುಗಿಲೆದ್ದಿದ್ದು ಪ್ರಾಧಿಕಾರದ ಆದೇಶ ಖಂಡಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಲಾಯಿತು. ಶ್ರೀರಂಗಪಟ್ಟಣ ದಲ್ಲಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದ ಕಾವೇರಿ ನದಿ ತೀರದ ಸ್ನಾನಘಟ್ಟದ ಬಳಿ ಕಪ್ಪು ಬಾವುಟ ಪ್ರದರ್ಶಿಸಿದರು.
ರೈತ ಹೋರಾಟಗಾರ ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನೀರು ಹರಿಸಲು ಆದೇಶ ನೀಡಿರುವ ಪ್ರಾಧಿಕಾರ ವಿರುದ್ಧ ಧಿಕ್ಕಾರ ಕೂಗಿ ಅಧಿಕಾರಕ್ಕಾಗಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಹರಿಸದಂತೆ ಆಗ್ರಹಿಸಲಾಯಿತು. ಜೊತೆಗೆ ಒಂದು ವೇಳೆ ರಾಜ್ಯ ಸರ್ಕಾರ ನೀರು ಹರಿಸಿದರೆ ರಾಜ್ಯದಂತ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಲಾಯಿತು .ನಂತರ ರೈತ ಮುಖಂಡ ನಂಜುಂಡೇಗೌಡ ಮಾತನಾಡಿ ಕಾವೇರಿ ನಿರ್ವಹಣಾ ಪ್ರಾಧಿಕಾರ ಕೊಟ್ಟಿರುವ ತೀರ್ಮಾನ ನೋಡಿದರೆ ಕಾನೂನು ಇಷ್ಟೊಂದು ದುರ್ಬಲವಾಗಿದ್ಯ ಅನಿಸುತ್ತದೆ. ನಮಗೆ ಕುಡಿಯಲು ನೀರಿಲ್ಲ ರೈತರು ನೀರು ಬಿಟ್ಟು ಬಿಟ್ಟು ಎದೆಯ ಮೇಲೆ ಕಲ್ಲು ಹಾಕಿಕೊಂಡಿದ್ದಾರೆ. ರಾಜ್ಯ ಸರ್ಕಾರ ರೈತರ ಪರ ನಿಲ್ಲಬೇಕಾದ ಜವಾಬ್ದಾರಿ ಇದೆ .ನೀರಿನ ಕೊರತೆ ಬಗ್ಗೆ ಮನದಟ್ಟು ಮಾಡಿಕೊಳ್ಳುವ ಕೆಲಸವನ್ನು ಮಾಡಬೇಕು ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡದೆ ಎಲ್ಲಾ ನಾಯಕರು ಒಟ್ಟಾಗಿ ಧ್ವನಿ ಎತ್ತುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಉಗ್ರ ಚಳುವಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.