ಮೈಸೂರು: ಅಪಘಾತದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಅಂಗಾಂಗ ದಾನ ಮಾಡಲಾಗಿದ್ದು, ಮೃತರ ಕುಟುಂಬಸ್ಥರು ನಾಲ್ವರ ಜೀವನಕ್ಕೆ ಬೆಳಕಾಗುವಂತೆ ಮಾಡಿದ್ದಾರೆ. ಮೈಸೂರಿನ ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಕೆಆರ್‌ಎಸ್ ರಸ್ತೆ ಜೆಎಸ್‌ಎಸ್ ಕಾಲೇಜು ಸಮೀಪ ಎರಡು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಸೈಯದ್ ಪರ್ವೀಜ್ (೫೨) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದರು.
ಸೈಯದ್ ಅವರನ್ನು ಸೆ. ೮ರಂದು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಸೈಯದ್ ಸ್ಥಿತಿ ತೀರ ಗಂಭೀರವಾಗಿದ್ದರಿಂದ ೪ ದಿನಗಳ ಕಾಲ ಐಸಿಯುದಲ್ಲಿ ಇರಿಸಲಾಗಿತ್ತು. ಸೆ. ೧೨ರಂದು ಮೆದುಳಿನ ಅಂಗಾಂಶ ವೈಫಲ್ಯ ಹಿನ್ನೆಲೆ ಅವರ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಎಂದು ವೈದ್ಯರು ತಿಳಿಸಿದ್ದರು. ನಂತರ ಶಿಷ್ಟಾಚಾರದ ಪ್ರಕಾರ ಅವರ ಕುಟುಂಬದೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದು, ಕುಟುಂಬದವರು ಸೈಯದ್ ಅವರ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದರು.
ಅಪೊಲೋ ಆಸ್ಪತ್ರೆಯಲ್ಲಿ ಇಂದು (ಸೆ.೧೩) ಬೆಳಗ್ಗೆ ಸೈಯದ್ ಪರ್ವೀಜ್ ಅಂಗಗಳನ್ನು (೨ ಕಿಡ್ನಿ, ೧ ಲಿವರ್ ಮತ್ತು ಹೃದಯ ಕವಾಟಗಳು) ಹೊರ ತೆಗೆಯಲಾಗಿದೆ. ಬಳಿಕ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಲಿವರ್, ಒಂದು ಕಿಡ್ನಿ ಕ್ಲಿಯರ್ ಮೆಡಿರೇಡಿಯಂಟ್ ಆಸ್ಪತ್ರೆ ಮತ್ತು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಒಂದು ಕಿಡ್ನಿ ಹಾಗೂ ಹೃದಯ ಕವಾಟಗಳನ್ನು ರವಾನೆ ಮಾಡಲಾಗಿದೆ.
ಅಂಗಾಂಗ ದಾನದಿಂದ ಒಬ್ಬ ದಾನಿಯು ೮ ಜೀವಗಳನ್ನು ಉಳಿಸಬಹುದು, ಹಾಗೆಯೇ ಅಂಗಾಂಶ ದಾನ ಮಾಡುವ ದಾನಿಯು ೫೦ ಜನರ ಜೀವಕ್ಕೆ ನೆರವಾಗಬಹುದು. ದಾನ ಮಾಡಬಹುದಾದ ಅಂಗಗಳೆಂದರೆ ಹೃದಯ, ಲಿವರ್, ಕಿಡ್ನಿ, ಶ್ವಾಸಕೋಶ, ಪ್ಯಾಂಕ್ರಿಯಾಸ್ ಮತ್ತು ಕರುಳುಗಳಾಗಿವೆ. ಕಸಿ ಮಾಡುವಿಕೆ ಸಂಬಂಧ ಇರುವ ಕರ್ನಾಟಕ ವಲಯ ಸಮನ್ವಯ ಸಮಿತಿಯ (ಝೇಡ್‌ಸಿಸಿಕೆ) ನಿರ್ದೇಶನದ ಅಡಿ ೨೦೦೭ರಿಂದ ಈವರೆಗೆ ಕರ್ನಾಟಕದಲ್ಲಿ ೮೭೭ ಬಹು ಅಂಗಾಂಗ ದಾನ ಮತ್ತು ೨,೩೫೨ ಅಂಗಾಂಶ ದಾನ ಮಾಡಲಾಗಿದೆ. ಕರ್ನಾಟಕದಲ್ಲಿ ಸಂಪೂರ್ಣ ಕಸಿ ಪ್ರಕ್ರಿಯೆಯು ಝೇಡ್‌ಸಿಸಿಕೆ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ ಎಂದು ಬಿಜಿಎಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಕರ್ನಾಟಕದ ಎಸ್‌ಒಟಿಟಿಒ ಅಡಿ ಅಂಗಾಂಗ ಕಸಿಗಾಗಿ ೫ನೇ ವಲಯವೆಂದು ಗುರುತಿಸಲ್ಪಟ್ಟಿರುವ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯು ಬಹುಅಂಗಾಂಗ ಕಸಿಗೆ ಪರವಾನಗಿ ಪಡೆದ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ಅಂಗಾಂಗ ಕಸಿಗಾಗಿ ಹೊಂದಾಣಿಕ ಮಾಡುವ ಸೌಲಭ್ಯವನ್ನು ಸುಲಭಗೊಳಿಸುವ ಸಂಬಂಧ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅದರಂತೆ ಅಂಗಾಂಗ ಕಸಿಗೆ ಒಳಗಾಗುವ ರೋಗಿಗಳ ಕ್ರಾಸ್ ಮ್ಯಾಚಿಂಗ್ ಅನ್ನು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಕೈಗೊಳ್ಳಲಾಗುತ್ತದೆ.