ಮಂಡ್ಯ: ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಜನವರಿ ೨೬ ರಿಂದ ಫೆಬ್ರವರಿ ೨೩ ರವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂವಿಧಾನ ಜಾಗೃತಿ ಜಾಥ ಹಮ್ಮಿಕೊಳ್ಳಲಾಗುತ್ತಿದ್ದು, ಶಾಲಾ-ಕಾಲೇಜುಗಳು ಸೇರಿದಂತೆ ಜಿಲ್ಲೆಯ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿ ಜಾಗೃತಿ ಜಾಥದ ಯಶಸ್ಸಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನದ ಮಹತ್ವ ಹಾಗೂ ಮೌಲ್ಯದ ಕುರಿತು ಅರಿವು ಮೂಡಿಸುವುದು ಹಾಗೂ ದೇಶದ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳು ಕುರಿತಂತೆ ರಾಜ್ಯದ ಮಹಿಳೆಯರು, ಯುವ ಜನತೆ, ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ರಾಷ್ಟ್ರೀಯ ಏಕತೆಯನ್ನು ಎತ್ತಿಹಿಡಿಯುವುದು ಸಂವಿಧಾನ ಜಾಗೃತಿ ಜಾಥದ ಉದ್ದೇಶವಾಗಿದೆ ಎಂದರು.
ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಆದ್ಯ ಕರ್ತವ್ಯವಾಗಿದೆ. ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರವು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, ಜನವರಿ ೨೬ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಗುವುದು ಎಂದರು.
ಜಿಲ್ಲೆಯ ೨೩೩ ಗ್ರಾಮ ಪಂಚಾಯಿತಿಗಳು ಜಾಥಾವನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡಿವೆ. ಸಂವಿಧಾನದ ಪೀಠಿಕೆಯನ್ನು ಎಲ್. ಇ. ಡಿ ಪ್ರದರ್ಶನ ಮಾಡಲಾಗುವುದು. ಗ್ರಾಮ ಪಂಚಾಯಿತಿಗೆ ಯಾವ ದಿನ ಸಂವಿಧಾನ ಜಾಥಾ ಮೆರವಣಿಗೆ ಬರಲಿದೆ ಎಂಬುದನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಅದರಂತೆ ಎಲ್ಲಾ ಸಾರ್ವಜನಿಕರು, ಸಂಘ – ಸಂಸ್ಥೆಗಳು, ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಭಾಗವಹಿಸಿ ವಿಜೃಂಭಣೆಯಿಂದ ಸಂವಿಧಾನ ಜಾಗೃತಿ ಜಾಥವನ್ನು ಯಶಸ್ವಿಗೊಳಿಸಬೇಕು ಎಂದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಸ್ತುತ ಸಂವಿಧಾನದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಾದವರಿಗೆ ಜಾಗೃತಿ ಜಾಥ ತಮ್ಮ ವ್ಯಾಪ್ತಿಗೆ ಬಂದಾಗ ಕಾರ್ಯಕ್ರಮ ಆಯೋಜಿಸಿ ಬಹುಮಾನ ವಿತರಿಸಬೇಕು ಎಂದರು. ಜಾಗೃತಿ ಜಾಥವು ಫೆಬ್ರವರಿ ೨೫ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಂವಿಧಾನ ಜಾಗೃತಿ ಸಮಾವೇಶ ತಲುಪಲಿದೆ. ಆಗಾಗಿ ಜಿಲ್ಲೆಯ ಸಂವಿಧಾನ ಜಾಗೃತಿ ಜಾಥಾ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಸಂವಿಧಾನ ಜಾಗೃತಿ ಜಾಥದಲ್ಲಿ ವಿವಿಧ ಕಲಾತಂಡಗಳ ಮೆರಗು ಇರಲಿ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಚರಿಸಲಿರುವ ಸಂವಿಧಾನ ಜಾಗೃತಿ ಜಾಥವು ಸ್ಥಳೀಯರ ಮನವಿ ಮೇರೆಗೆ ಪ್ರತಿ ಹಳ್ಳಿಗಳಿಗೂ ಸಂಚರಿಸಲಿ, ಜೊತೆಗೆ ಸ್ತಬ್ಧಚಿತ್ರದಲ್ಲಿ ಸಂವಿಧಾನ ಕುರಿತ ಪುಸ್ತಕಗಳ ಪ್ರದರ್ಶನವಿರಲಿ ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಖ್ ತನ್ವಿರ್ ಆಸೀಫ್ ರವರು ಮಾತನಾಡಿ ಸಂವಿಧಾನ ಜಾಗೃತಿ ಜಾಥಾ ತಮ್ಮ ವ್ಯಾಪ್ತಿಗೆ ಬಂದಾಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪಿ. ಡಿ. ಒ ಗಳು ಸೇರಿ ಹಬ್ಬದ ವಾತಾವರಣ ಸೃಷ್ಠಿಸಿ ಜಾಥಾವನ್ನು ಬರಮಾಡಿಕೊಳ್ಳಿ ಎಂದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.