ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯೊನ್ಮುಖರಾಗುವಂತೆ ಶಾಸಕ ಡಿ.ರವಿಶಂಕರ್ ತಾಲೂಕಿನ ಆರೋಗ ಇಲಾಖೆಯ ವೈದ್ಯರು, ಸಿಬ್ಬಂದಿಗಳಿಗೆ ಮನವಿ ಮಾಡಿದರು.
ಕೆ.ಆರ್.ನಗರ ಪಟ್ಟಣದ ತಾಲೂಕು ಪಂಚಾಯತ್ ನ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿ ನೇತ್ರದಾನದ ಅಗತ್ಯತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಿ ಎಂದು ಸಲಹೆ ನೀಡಿದ ಶಾಸಕರು ಕೆಲವೊಂದು ಘಟನೆಗಳಿಂದ ಮಕ್ಕಳು ಮತ್ತು ಯುವಕರು ಇಡೀ ಬದುಕನ್ನು ಕತ್ತಲೆಯಲ್ಲಿ ಕಳೆಯುವ ಸಂದರ್ಭಗಳಿವೆ ಹಾಗಾಗಿ ಕಸಿ ಮಾಡುವ ಮೂಲಕ ಈ ಅಂಧತ್ವವನ್ನು ನಿವಾರಿಸಬಹುದು. ಹೀಗಾಗಿ, ಶವಸಂಸ್ಕಾರದ ಸಂದರ್ಭದಲ್ಲಿ ಕಣ್ಣುಗಳನ್ನು ಸುಡುವ ಬದಲು ಅಥವಾ ಮಣ್ಣಿನಲ್ಲಿ ಹೂಳುವ ಬದಲು ದಾನ ಮಾಡ ಬಹುದಾಗಿದ್ದು ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನ ಜನರಿಗೆ ದೇಹದ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಲ್ಲರ ಮಹತ್ವದ ಪಾತ್ರವನ್ನು ವಹಿಸ ಬೇಕಾಗಿದೆ ಎಂದರು.
ಎಲ್ಲರೂ ಮಾನವೀಯತೆ ಬೆಳೆಸಿಕೊಳ್ಳ ಬೇಕು, ಕಣ್ಣುಗಳನ್ನು ದಾನ ಮಾಡುವುದು ಶ್ರೇಷ್ಠ, ಅದಕ್ಕಾಗಿ ವರನಟ ಡಾ.ರಾಜ್ ಕುಮಾರ್ ಮಾದರಿಯಾಗಿ ನೇತ್ರದಾನ ಮಾಡಿದವರು ಇನ್ನೂ ಅವರ ಮಗ ಡಾ.ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳನ್ನು ದಾನ ಮಾಡಿದ್ದರಿಂದ, ಮಣ್ಣಲಿ ಮಣ್ಣಾಗುವ ಕಣ್ಣನ್ನು ದಾನ ಮಾಡಲು ಸಹಸ್ರಾರು ಜನರು ಕಣ್ಣುಗಳನ್ನು ದಾನ ಮಾಡಲು ಮುಂದೆ ಬಂದರು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ನಾನು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇನೆ, ಹಾಗಾಗಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು, ಆರೋಗ್ಯ ಸಹಾಯಕಿಯರು, ನರ್ಸ್ ಗಳು ಹಾಗೂ ಸಿಬ್ಬಂದಿಗಳು ತಮ್ಮ ಸಮಸ್ಯೆಗಳನ್ನು ತಿಳಿಸಿದರೇ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ನಾನು ಸದಾ ಸಿದ್ದನಿರುತ್ತೇನೆ ಎಂದರು.
ತಾಲೂಕಿನ ಚೀರನಹಳ್ಳಿ ಗ್ರಾಮದ ಕುಮಾರ್ ಎಂಬವರು ಇತ್ತೀಚಿಗೆ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಕುಟುಂಬದವರ ಸೂಚನೆ ಮೇರೆಗೆ ಅಂಗಾಂಗ ದಾನ ಮಾಡಿದ್ದಾರೆ, ಪ್ರಸ್ತುತ ಯಾರು ಕೂಡ ಅಂಗಾಂಗ ದಾನ ಮಾಡಲು ಯಾರು ಮುಂದೆ ಬರಲ್ಲ ಈ ಘಟನೆ ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತ ಪಡಿಸುವಂತಹದ್ದು, ಅಂಗಾಂಗ ದಾನ ಮಾಡಿ ಏಳೆಂಟು ಜನರ ಬಾಳಿಗೆ ಬೆಳಕಾದ ಚೀರ್ನಹಳ್ಳಿ ಗ್ರಾಮದ ಕುಮಾರ್ ಪತ್ನಿ ಚಂದ್ರಕಲಾ ಮತ್ತು ಕುಟುಂಬದವರಿಗೆ ಧನ್ಯವಾದಗಳನ್ಬು ಅರ್ಪಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಿದ ಚೀರ್ನಹಳ್ಳಿ ಗ್ರಾಮದ ಕುಮಾರ್ ಪತ್ನಿ ಚಂದ್ರಕಲಾ ಅವರನ್ನು ಶಾಸಕ ಡಿ.ರವಿಶಂಕರ್ ಗೌರವ ಸಮರ್ಪಣೆ ಮಾಡಿದರು. ಬಳಿಕ ತಾವು ಕೂಡ ಕಣ್ಣುಗಳನ್ನು ದಾನ ಮಾಡುವುದಾಗಿ ಶಾಸಕ ಡಿ.ರವಿಶಂಕರ್ ಪ್ರತಿಜ್ಞೆ ಮಾಡಿ ಸಹಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಧಿಕಾರಿ ಡಾ.ನಟರಾಜು ತಾ.ಪಂ.ಇಓ ಕುಲದೀಪ್, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅಶೋಕ, ತಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಹೆಚ್‌ಜೆ.ಮಹೇಶ್, ತಾ.ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ. ಆರೋಗ್ಯ ಸಂರಕ್ಷಣಾಧಿಕಾರಿ ಪಾರ್ವತಿ, ತಾ.ಪಂ.ಮೇಲ್ವಿಚಾರಕ ಕರೀಗೌಡ, ವಿವಿದ ಆರೋಗ್ಯ ಕೇಂದ್ರಗಳ ವೈದ್ಯರು, ಸಮುದಾಯ ಆರೋಗ್ಯ ಕ್ಷೇಮ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.