ಮೈಸೂರು: ನಾವು ಬಿಜೆಪಿ ಅವರ ರೀತಿ ೨೮ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸುಳ್ಳು ಹೇಳುವುದಿಲ್ಲ. ರಾಜ್ಯದಲ್ಲಿ ೨೦ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತದೆ ಎಂದು ಮುಖ್ತಮಂತ್ರಿ ಸಿದ್ಧರಾಮಯ್ಯ ಪುನರುಚ್ಚರಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅವರಿಗೆ ಅನುಕೂಲ ಆಗುವ ಬದಲು ನಮಗೇ ಹೆಚ್ಚು ಅನುಕೂಲವಾಗಲಿದೆ. ಯಾವ ರೀತಿ ಅನುಕೂಲ ಆಗಲಿದೆ ಎಂಬುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಕೆಲವು ಗುಟ್ಟುಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ನುಡಿದರು.
ಸಚಿವರ ಮಕ್ಕಳಿಗೆ ಟಿಕೆಟ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಜನರ ಅಭಿಪ್ರಾಯ ಕೇಳಿ ಟಿಕೆಟ್ ಕೊಟ್ಟಿದ್ದೇವೆ. ಜನರು ಇಂತವರು ಗೆಲ್ಲುತ್ತಾರೆ ಎಂದು ಹೇಳಿರುವುದರಿಂದ ಸಚಿವರ ಮಕ್ಕಳಿಗೆ ಸಂಬಂಧಿಗಳಿಗೆ ಟಿಕೆಟ್ ಕೊಟ್ಟಿದ್ದೇವೆ. ಇದು ಕುಟುಂಬ ರಾಜಕಾರಣ ಅಲ್ಲ ಎಂದು ಹೇಳಿದರು.
ನಾನು ಮೈಸೂರು ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇನೆ. ನಮ್ಮ ಗ್ಯಾರಂಟಿ ಯೋಜನೆಗಳು ಈ ಬಾರಿ ನಮ್ಮ ಕೈ ಹಿಡಿಯಲಿದೆ. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿಯವರ ರೀತಿ ಸುಳ್ಳುಗಳನ್ನು ಹೇಳಿ ಮತ ಕೇಳುತ್ತಿಲ್ಲ. ನಮ್ಮ ಸಾಧನೆ ಮೇಲೆ ಮತ ಕೇಳುತ್ತೇವೆ ಎಂದು ಹೇಳಿದರು.
ಶಾಸಕ ಶ್ರೀನಿವಾಸ್ ಲೋಕಸಭಾ ಚುನಾವಣೆಯಲ್ಲಿ ಗೆಲ್ಲದಿದ್ದರೆ ಸಿದ್ಧರಾಮಯ್ಯ ಸ್ಥಾನ ಹೋಗುತ್ತದೆ ಎಂದು ಹೇಳಿಲ್ಲ. ನೀವು ಅವರು ಮಾತನಾಡಿರುವ ಹಿಂದಿನ ಕಂಟೆಂಟ್ ಬಿಟ್ಟು ಒಂದನ್ನೇ ಹಿಡಿದುಕೊಳ್ಳುತ್ತೀರಿ. ಅವರು ಹೇಳಿರುವುದು ಸಿದ್ಧರಾಮಯ್ಯ ಅವರು ಇಷ್ಟೆಲ್ಲಾ ಗ್ಯಾರಂಟಿ ಯೋಜನೆ ಜಾರಿಮಾಡಿದ್ದಾರೆ. ಬಡವರ ಪರ ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನೇ ಮುಂದುವರೆಸಬೇಕು ಎಂದಿದ್ದಾರೆ ಎಂದರು.