ಪಿರಿಯಾಪಟ್ಟಣ: ದೇಶದ ಅಭಿವೃದ್ಧಿ ಹಾಗೂ ಜನಪರ ಆಡಳಿತಕ್ಕಾಗಿ ಮತದಾರರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಿಜೆಪಿ ಮುಖಂಡ ಪಿ.ಪ್ರಶಾಂತ್ ಗೌಡ ಮನವಿ ಮಾಡಿದರು.
ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಮಹಾ ಶಕ್ತಿ ಕೇಂದ್ರದ ವಿವಿಧ ಗ್ರಾಮಗಳಲ್ಲಿ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಚುನಾವಣಾ ಪ್ರಚಾರ ಕೈಗೊಂಡು ಅವರು ಮಾತನಾಡಿದರು.

ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿಜೆಪಿಯ ಯದುವೀರ್ ಒಡೆಯರ್ ಅವರ ಪರ ಕ್ಷೇತ್ರದಾದ್ಯಂತ ಉತ್ತಮ ವಾತಾವರಣವಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಜನಪರ ಕೆಲಸಗಳು ಮತ್ತು ರಾಜ ಮನೆತನದ ಸಾರ್ವಜನಿಕ ಒಡನಾಟ ಗೆಲುವಿಗೆ ಸಹಕಾರಿಯಾಗಲಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಉಭಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಾಜಿ ಶಾಸಕರಾದ ಕೆ.ಮಹದೇವ್ ಹಾಗೂ ಹೆಚ್.ಸಿ ಬಸವರಾಜು ಅವರ ಮಾರ್ಗದರ್ಶನದಲ್ಲಿ ಪ್ರಚಾರ ಕೈಗೊಂಡಿದ್ದು ಈ ಬಾರಿ ತಾಲೂಕಿನಲ್ಲಿಯೂ ಮೈತ್ರಿ ಅಭ್ಯರ್ಥಿ ಪರ ಹೆಚ್ಚು ಮತ ಬರುವ ನಿರೀಕ್ಷೆ ಇದೆ ಎಂದರು.
ಮಾಜಿ ಶಾಸಕರಾದ ಎಚ್.ಸಿ ಬಸವರಾಜು ಅವರು ಮಾತನಾಡಿ ಕಳೆದ ಎರಡು ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಇಡೀ ವಿಶ್ವವೇ ದೇಶದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ, ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್ ಡಿಎ ಸದೃಢ ಸರ್ಕಾರ ರಚಿಸಬೇಕೆಂಬ ಆಸೆ ಪ್ರತಿಯೊಬ್ಬ ಮತದಾರರ ಮನದಾಳದಲ್ಲಿದ್ದು ಜನಪರ ಕೆಲಸ ಮಾಡಬೇಕೆಂಬ ನಿಟ್ಟಿನಲ್ಲಿ ರಾಜಕೀಯಕ್ಕೆ ಪಾದರ್ಪಣೆ ಮಾಡಿರುವ ಯದುವೀರ್ ಒಡೆಯರ್ ಅವರ ಗೆಲುವಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಿಂದ ಸಂಘಟಿತರಾಗಿ ಅತಿ ಹೆಚ್ಚು ಅಂತರದಿಂದ ಗೆಲ್ಲಿಸಲು ಕೋರಿದರು.

ಈ ಸಂದರ್ಭ ತಾಲೂಕು ಪ್ರಧಾನ ಕಾರ್ಯದರ್ಶಿ ರವಿ, ಆಲನಹಳ್ಳಿ ಗಣೇಶ್, ಕಾರ್ಯದರ್ಶಿ ನಾಗೇಶ್, ಜಿಲ್ಲಾ ರೈತ ಮೋರ್ಚ ಕಾರ್ಯದರ್ಶಿ ಕಿರಂಗೂರು ಮೋಹನ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಾಗಳಿ ಸ್ವಾಮಿ, ಮುಖಂಡರಾದ ವಿಶ್ವನಾಥ್, ಮನು, ಸುಬ್ಬಣ್ಣ, ಮಂಜು, ನಾಗರಾಜ್, ಬಸವರಾಜ್, ಕುಮಾರ್, ರವಿ, ಷಣ್ಮುಗ ಸುಬ್ರಹ್ಮಣ್ಯ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು.