ಮೈಸೂರು: ಜಯದೇವ ಆಸ್ಪತ್ರೆಯಲ್ಲಿ ೧೭ ವರ್ಷಗಳ ಕಾಲ ನಿರ್ದೇಶಕನಾಗಿ ನನ್ನ ಸೇವೆಯನ್ನು ಸಾರ್ವಜನಿಕರಿಗೆ ಮೀಸಲಿಟ್ಟು ೩೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ೨೦೦೦ ಹಾಸಿಗೆ ಸಾಮಥ್ಯಕ್ಕೆ ಹೆಚ್ಚಿಸಿ ದೇಶದಲ್ಲಿಯೇ ನಂಬರ್ ಒನ್ ಆಸ್ಪತ್ರೆ ಮಾಡಿದ ಹೆಮ್ಮೆ ಹಾಗೂ ತೃಪ್ತಿ ನನಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು.
ಡಾ. ಸಿ.ಎನ್.ಮಂಜುನಾಥ್‌ರವರು ಜನವರಿ ೩೧ರಂದು ಸೇವೆಯಿಂದ ನಿವೃತ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಮೊದಲ ಮನೆ ಆಸ್ಪತ್ರೆ, ೨ನೇಯದು ಮನೆಯಾಗಿತ್ತು. ಜಯದೇವ ಆಸ್ಪತ್ರೆಯನ್ನು ಖಾಸಗಿ ಪಂಚತಾರ ಹೋಟೆಲ್ ಮಾದರಿಯಲ್ಲಿ ನಿರ್ವಹಣೆ ಮಾಡಿ ಮಾನವೀಯತೆಗೆ ಮೊದಲ ಆದ್ಯತೆ ನೀಡಿ. ಮೊದಲು ಟ್ರೀಟ್‌ಮೆಂಟ್ ನಂತರ ಪೇಮೆಂಟ್ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಿದ್ದೇನೆ. ಇದುವರೆಗೆ ಹಣವಿಲ್ಲ, ಕಾರ್ಡ್ ಇಲ್ಲ ಎಂದು ಒಬ್ಬ ರೋಗಿಯನ್ನು ಚಿಕಿತ್ಸೆ ನೀಡದೆ ಹಿಂದಕ್ಕೆ ಕಳುಹಿಸಿಲ್ಲ ಎನ್ನುವುದು ಜೀವಂತ ದಂತ ಕಥೆಯಾಗಿದೆ. ಈ ಸಾಧನೆ ವೈದ್ಯಕೀಯ ಕ್ಷೇತ್ರಕ್ಕೆ ಸರ್ಕಾರಕ್ಕೆ ಗೌರವ ತರುತ್ತದೆ ಎಂದರು.
ಜಯದೇವ ಆಸ್ಪತ್ರೆ ಶಾಖೆಗಳನ್ನು ಮೈಸೂರು, ಕಲ್ಬುರ್ಗಿ, ಕೆ.ಸಿ. ಜನರಲ್ ಆಸ್ಪತ್ರೆ, ಇ.ಎಸ್.ಐ ರಾಜಾಜಿನಗರ, ಇನ್ಸ್‌ಸ್ಟೋಸಿಸ್ ಬ್ಲಾಕ್ ನಿರ್ಮಿಸಿದ್ದೇವೆ. ಓಪಿಡಿಯಲ್ಲಿ ಇದುವರೆಗೆ ೭೫ ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. ೮ ಲಕ್ಷ ಜನರಿಗೆ ಆಂಜಿಯೋಪ್ಲಾಸ್ಟಿ, ೫೫ ಲಕ್ಷ ಜನರಿಗೆ ಎಕೊ ಮಾಡಲಾಗಿದೆ. ೧೨೫ ಜನ ತಜ್ಞ ವೈದ್ಯರು ೪೦ ಜನ ಸರ್ಜನ್‌ಗಳು, ೪೦ ಜನ ಅರವಳಿಕೆ ತಜ್ಞರು, ಸಾವಿರಾರು ಜನ ಸಿಬ್ಬಂದಿಯನ್ನು ಜಯದೇವ ಸಂಸ್ಥೆ ಹೊಂದಿದ್ದು, ಉತ್ತಮ ಸೇವೆ ನೀಡುತ್ತಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿಯೂ ಸಂಸ್ಥೆಗೆ ಪ್ರಶಂಸೆ ಲಭಿಸಿದೆ.
ದೇಶ, ವಿದೇಶಗಳಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ ಅವರು ನನಗೆ ಇದುವರೆಗೆ ಸಹಕರಿಸಿದ ಸರ್ಕಾರ ಹಾಗೂ ಎಲ್ಲಾ ಮುಖ್ಯಮಂತ್ರಿಗಳಿಗೂ ಧನ್ಯವಾದ ತಿಳಿಸಿದರು. ಈಗಾಗಲೇ ಹೊಸ ನಿರ್ದೇಶಕರ ಪ್ರಕ್ರಿಯೆ ಪ್ರಾರಂಭವಾಗಿದೆ. ಉತ್ತಮ ಸೇವಾ ಮನೋಭಾವ ಇರುವ ನಿರ್ದೇಶಕರು ಸಂಸ್ಥೆಯ ಚುಕ್ಕಾಣಿ ಹಿಡಿಯಲಿ, ಬಡವರಿಗೆ ಉತ್ತಮ ಚಿಕಿತ್ಸೆ ನೀಡಲಿ ಎಂದರು.