ಬೆಂಗಳೂರು: ರಾಜ್ಯಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ವಿಧಾನಸೌಧದ ಆವರಣದಲ್ಲಿಯೇ ದೇಶದ್ರೋಹದ ಘೋಷಣೆ ಮೊಳಗಿದೆ. ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಸಿರ್ ಹುಸೇನ್ ಅವರ ಬೆಂಬಲಿಗರ ಪೈಕಿ ಒಬ್ಬರು ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆ ಕೂಗಿದ್ದಾರೆ. ನಾಸೀರ್ ಹುಸೇನ್ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ಪಾಕಿಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಇದೇ ವೇಳೆ ಪಕ್ಕದಲ್ಲಿದ್ದ ಕೆಲವರು ಆತನ ಬಾಯಿಮುಚ್ಚಿಸಿದ್ದಾರೆ. ಇದೀಗ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗಿದೆ.
ನಾಸೀರ್ ಹುಸೇನ್ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ ಅವರ ಅಭಿಮಾನಿಗಳು ವಿಧಾನಸೌಧದ ಲಾಂಜ್ ಬಳಿ ಸಂಭ್ರಮಾಚರಣೆ ಮಾಡಿದರು. ನಾಸೀರ್ ಹುಸೇನ್ ಅವರಿಗೆ ಹೂವಿನ ಹಾರ ಹಾಕಿ ಶುಭಾಶಯಗಳನ್ನು ತಿಳಿಸುತ್ತಿದ್ದರು. ಈ ವೇಳೆ ನಾಸೀರ್ ಹುಸೇನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಅವರ ಹಿಂದೆ ನಿಂತಿದ್ದ ಬೆಂಬಲಿಗನೋರ್ವ ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಎರಡು ಬಾರಿ ಘೋಷಣೆ ಕೂಗಿದ್ದಾರೆ. ವಿಡಿಯೋದಲ್ಲಿ ಅದು ಅಸ್ಪಷ್ಟವಾಗಿ ಕೇಳಿಸುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತನೋರ್ವ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ನೂತನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರನ್ನು ವರದಿಗಾರರೊಬ್ಬರು ಪ್ರಶ್ನಿಸಿದರು. ಇದಕ್ಕೆ ಕೆಂಡಾಮಂಡಲರಾದ ನಾಸೀರ್ ಹುಸೇನ್ , ಪ್ರಶ್ನೆ ಮಾಡಿದ ವರದಿಗಾರನ ಮುಖಕ್ಕೆ ತಿವಿಯಲು ಮುಂದಾಗಿದ್ದಾರೆ.
ದೂರು ನೀಡಲು ಬಿಜೆಪಿ ತೀರ್ಮಾನ
ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ದೂರು ನೀಡಲು ಬಿಜೆಪಿ ಮುಂದಾಗಿದೆ.
ಎಂಎಲ್ಸಿ ಎನ್.ರವಿಕುಮಾರ್ ನೇತೃತ್ವದಲ್ಲಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಇದು ರಾಜಕೀಯ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಇನ್ನು ಈ ಬಗ್ಗೆ ವಿಧಾನಪರಿಷತ್ನ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರತಿಕ್ರಿಯಿಸಿ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರನ್ನು ತಕ್ಷಣ ಬಂಧಿಸಬೇಕು. ನಾಳೆ ಸದನದಲ್ಲಿ ಪಾಕಿಸ್ತಾನ ಪರ ಘೋಷಣೆ ವಿಚಾರ ಪ್ರಸ್ತಾಪಿಸುತ್ತೇವೆ. ಘೋಷಣೆ ಕೂಗಿದವನ ಬಂಧನಕ್ಕೆ ಆಗ್ರಹಿಸುತ್ತೇವೆ ಎಂದರು.