ಪಣಜಿ: ಉತ್ತರ ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಕಂದಕಕ್ಕೆ ಢಿಕ್ಕಿ ಹೊಡೆದು 27 ವರ್ಷದ ಪ್ರವಾಸಿ ಮಹಿಳೆ ಮತ್ತು ಆಕೆಯ ಇನ್ಸ್ಟ್ರಕ್ಟರ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಶನಿವಾರ ಸಂಜೆ ಕೇರಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಣೆ ನಿವಾಸಿ ಶಿವಾನಿ ಡೇಬಲ್ ಮತ್ತು ಆಕೆಯ ಇನ್ಸ್ಟ್ರಕ್ಟರ್ ನೇಪಾಳ ಪ್ರಜೆ ಸುಮಲ್ ನೇಪಾಳಿ (26) ಸಂಜೆ 5 ಗಂಟೆ ಸುಮಾರಿಗೆ ಕೇರಿ ಪ್ರಸ್ಥಭೂಮಿಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಡೇಬಲ್ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಹಸ ಕ್ರೀಡಾ ಕಂಪನಿಯೊಂದಿಗೆ ಪ್ಯಾರಾಗ್ಲೈಡಿಂಗ್ ಮಾಡಲು ಆಯ್ಕೆ ಮಾಡಿಕೊಂಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ದೂರಿನ ಪ್ರಕಾರ, ಪ್ಯಾರಾಗ್ಲೈಡರ್ ಬಂಡೆಯಿಂದ ಹಾರಿದ ಕೂಡಲೇ ಕಂದಕಕ್ಕೆ ಬಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಮಾನವ ಜೀವಕ್ಕೆ ಅಪಾಯವನ್ನುಂಟುಮಾಡಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಕಂಪನಿಯ ಮಾಲೀಕ ಶೇಖರ್ ರೈಜಾದಾ ವಿರುದ್ಧ ಮಾಂಡ್ರೆಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.