ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳಾದರೂ ಸಮಾಜಕ್ಕೆ 2 ಎ ಮೀಸಲಾತಿ ಸಿಕ್ಕಿಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಶೀಘ್ರವೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲಿ. ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ನಡೆದ ಹೋರಾಟದ ಮಾದರಿಯಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯಾವುದೇ ರಾಜಕೀಯ ಆಸೆ ಆಮೀಷಗಳಿಗೆ ಬಗ್ಗದೆ ಸಮಾಜದ ಮೀಸಲಾತಿಗಾಗಿ ಸ್ವಾಮೀಜಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಲಿಂಗ ಪೂಜೆ ಮಾಡಿಕೊಂಡು ಹೋರಾಟ ಮಾಡಿದ್ದಾರೆ ಎಂದು ಕೂಡಲಸಂಗಮ ಸ್ವಾಮೀಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.