ಪಿರಿಯಾಪಟ್ಟಣ: ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿಗ ನಿರ್ದೇಶಕರ ಜಿದ್ದಾಜಿದ್ದಿನಿಂದ ಕಳೆದ ಬಾರಿ ಮುಂದೂಡಿದ್ದ ತಾಲ್ಲೂಕಿನ ಪಂಚವಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿಗ ಪರಮೇಶ್ ಮತ್ತು ಉಪಾಧ್ಯಕ್ಷರಾಗಿ ರುದ್ರೇಗೌಡ ಆಯ್ಕೆಯಾದರು.
ಒಟ್ಟು 12 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಸದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿಗ ತಲಾ 6 ಸದಸ್ಯರು ಅವಿರೋಧ ಆಯ್ಕೆಯಾಗಿದ್ದರು ನಂತರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಚುನಾವಣೆ ಸಂದರ್ಭ ಎರಡು ಪಕ್ಷದ ಬೆಂಬಲಿಗ ನಿರ್ದೇಶಕರಲ್ಲಿ ಬ್ಯಾಂಂಕ್ ಪ್ರತಿನಿಧಿ ಬದಲಾವಣೆ ಸಂಬಂಧ ರಾಜಕೀಯ ತಿರುವು ಪಡೆದು ಹೈಡ್ರಾಮ ನಡೆಸಿ ಚುನಾವಣೆ ಮುಂದೂಡಲಾಗಿತ್ತು, ಬಳಿಕ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಗರು ಜಯಗಳಿಸುವ ಮೂಲಕ ರಾಜಕೀಯ ಸೇಡು ತೀರಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಗ ಅಭ್ಯರ್ಥಿಗಳಿಗೆ 8 ಮತ ಮತ್ತು ಕಾಂಗ್ರೆಸ್ ಬೆಂಬಲಿಗ ಅಭ್ಯರ್ಥಿಗೆ 5 ಮತ ಲಭಿಸಿದ್ದು ಪರಮೇಶ್ ಅವರ ವಿರುದ್ಧ ಹೆಚ್.ಎಸ್ ಪ್ರಕಾಶ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿ ಮತ್ತು ರುದ್ರೇಗೌಡ ಅವರ ಉಪಾಧ್ಯಕ್ಷ ಸ್ಥಾನಕ್ಕೆ ಮೀನಕ್ಷಮ್ಮ ಆಕಾಂಕ್ಷಿಯಾಗಿದ್ದು ಚುನಾವಣಾ ಅಧಿಕಾರಿ ಸೈಯದಾ ಉಜ್ಮ್ ಶಮಾನಾ ಅವರು 8 ಮತ ಪಡೆದ ಪರಮೇಶ್ ಅವರನ್ನು ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ರುದ್ರೇಗೌಡ ಅವರನ್ನು ಆಯ್ಕೆ ಮಾಡಿ ಘೋಷಿಸಿದರು, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಜೆಡಿಎಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಪರಮೇಶ್ ಅವರು ಮಾತನಾಡಿ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲಾ ನಿರ್ದೇಶಕರು ಹಾಗೂ ಮಾಜಿ ಶಾಸಕರಾದ ಕೆ. ಮಹದೇವ್ ಮತ್ತು ಪಕ್ಷದ ಬೆಂಬಲಿಗರಿಗೆ ಧನ್ಯವಾದ ತಿಳಿಸಿ ಮುಂಬರುವ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ ಸರ್ಕಾರದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಭರವಸೆ ನೀಡಿದರು.
ಈ ಸಂದರ್ಭ ಕೆ.ಎಸ್ ಲಕ್ಷ್ಮಣಗೌಡ , ಎಚ್.ಕೆ ಮೋಹನ್ ಕುಮಾರ್, ಶೇಕ್ ಜಾಫರ್ ಸಾಧಿಕ್, ಎಸ್.ಎಸ್ ಪವನ್ ಕುಮಾರ್, ಕರಿನಾಯಕ, ಸಿ.ಕುಮಾರ್, ಜಯಮ್ಮ, ಕೆ.ನವೀನ್ ಕುಮಾರ್ , ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿರೀಶ್ ಮತ್ತಿತರಿದ್ದರು.