ಮಂಡ್ಯ: ಪಾಂಡವಪುರದ ಪಾಂಡವ ಕ್ರೀಡಾಂಗಣದ ಎದುರು ಎಚ್ಡಿಕೆಗೆ ಬೃಹತ್ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದ್ದು, ಎಚ್ ಡಿ ಕುಮಾರಸ್ವಾಮಿ ಅವರು ವೇದಿಕೆಗೆ ಆಗಮಿಸಿದರು. ವೇದಿಕೆ ಮುಂಭಾಗದ ಕಾರ್ಯಕರ್ತರತ್ತ ಕೈ ಮುಗಿದು, ಕೈಬೀಸಿ ದೀಪ ಬೆಳಗುವ ಮೂಲಕ ಅಭಿನಂದನಾ ಸಮಾರಂಭಕ್ಕೆ ವಿದ್ಯುತ್ ಚಾಲನೆ ನೀಡಿದರು.
ನಂತರ ಕೇಂದ್ರ ಸಚಿವ ಹೆಚ್ಡಿಕೆ ಮಾತನಾಡಿ, ಈ ಒಂದು ಸನ್ಮಾನ ಮಂಡ್ಯ ಜಿಲ್ಲೆಯ ಜನಕ್ಕೆ ಸಲ್ಲಬೇಕು. ಪುಟ್ಟರಾಜು ಅವರು ಇವತ್ತಿನ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರ ಕೂಡ ಇದೇ ಸ್ಥಳದಲ್ಲಿ ಆಗಿತ್ತು. ಆ ದಿನ ಕನಿಷ್ಠ 50 ಸಾವಿರ ಬಹುಮತ ಕೊಡಿ ಅಂತಾ ಮನವಿ ಮಾಡಿದ್ದೆವು. ಆ ಮನವಿ ಜಾರಿಗೆ ತಂದ ನಿಮಗೆ ವಿಶೇಷ ಗೌರವಪೂರ್ವಕ ವಂದನೆಗಳು.
ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಹೆಚ್ಚಿನ ಬಹುಮತ ಕೊಟ್ಟಿದ್ದೀರಿ. ಮಂಡ್ಯದ ಜನ ಕೊನೆ ಹಂತದಲ್ಲಿ ನಾನು ನಿಲ್ಲುವಂತೆ ಒತ್ತಡ ಹಾಕಿದ್ರು. ಹೆಚ್ಚು ಸಮಯ ಪ್ರಚಾರಕ್ಕೆ ಬರಲು ಆಗಲಿಲ್ಲ. ಆದರೂ ಈ ಬೃಹತ್ ಬಹುಮತ ಕೊಟ್ಟು ಗೆಲ್ಲಿಸಿದ್ದೀರಿ. ಕುಮಾರಣ್ಣ ಗೆದ್ದರೆ ಮಂಡ್ಯಕ್ಕೆ ಮಾತ್ರವಲ್ಲ, ಇಡೀ ರೈತರಿಗೆ ಉಪಯೋಗ ಅಂತಾ ನೀವೇ ಚುನಾವಣೆ ಮಾಡಿದ್ರಿ. ನಿಮ್ಮ ಕುಟುಂಬದ ಅಣ್ಣನೋ ತಮ್ಮನೋ ಅಂತಾ ಭಾವಿಸಿ ಮತಕೊಟ್ಟಿದ್ದೀರಿ. ಇದು ನನ್ನ ಗೆಲುವಲ್ಲ, ಮಂಡ್ಯ ಜಿಲ್ಲೆಯ ಜನತೆಯ ಗೆಲುವು ಎಂದರು.
ಕೃಷಿ ಸಚಿವ ಆಗಲಿಕ್ಕೆ ಆಗಲಿಲ್ಲ-ನೋವಿನ ನುಡಿ
ಕೃಷಿ ಮಂತ್ರಿ ಆಗಬಹುದು ಎಂಬ ಆಸೆ ಇತ್ತು. ಆದರೆ ನಾನು ಕೃಷಿ ಸಚಿವ ಆಗಲಿಕ್ಕೆ ಆಗಲಿಲ್ಲ. ಇವತ್ತು ನನಗೆ ನೋವಿದೆ. ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಇದು ನನ್ನ ಮನಸ್ಸಿಗೆ ಆಗಿರುವ ನೋವು. ನಾನು ಈ ಹಿಂದೆಯೂ ಹೇಳಿದ್ದೆ. ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಅಧಿಕಾರಕ್ಕೆ ಬಂದ ನಂತರ ರೈತರ ನೆರವಿಗೆ ಬರ್ತೀನಿ ಅಂತ.
ನಾನು ಕೇಂದ್ರ ಸಚಿವ ಆದ ನಂತರ ಜನತಾದರ್ಶನ ಮಾಡಿದೆ. ಜನತಾದರ್ಶನದಲ್ಲಿ 400ಕ್ಕೂ ಹೆಚ್ಚು ಕಂದಾಯ ಇಲಾಖೆ ಸಮಸ್ಯೆ ಅರ್ಜಿಗಳು ಹೆಚ್ಚು ಬಂದಿವೆ. ಬಡತನಕ್ಕೆ ಆರ್ಥಿಕ ನೆರವು ಕೋರಿ 200-300 ಪತ್ರ ಬಂದಿವೆ. ನಿರುದ್ಯೋಗ ಸಮಸ್ಯೆಯ 300ಕ್ಕೂ ಹೆಚ್ಚು ಅರ್ಜಿಯೂ ಬಂದಿವೆ. ನಿವೇಶನ ಇಲ್ಲದ ಸಮಸ್ಯೆಗಳ ಅರ್ಜಿಯೂ ಬಂದಿವೆ. ಯಾರಲ್ಲೂ ಆತಂಕ ಬೇಡ. ಮಂಗಳವಾರ, ಬುಧವಾರ ಮಂಡ್ಯ ಕಚೇರಿಯಲ್ಲಿ ನಮ್ಮ OSD ಇರ್ತಾರೆ.
ನಿಮ್ಮ ಸಮಸ್ಯೆಗಳನ್ನ ಆಲಿಸಿ, ಸ್ಪಂದಿಸುವ ಕೆಲಸ ಮಾಡ್ತಾರೆ. ಭಾರಿ ಕೈಗಾರಿಕಾ ಇಲಾಖೆಯಲ್ಲಿ ಹಲವಾರು ಬದಲಾವಣೆ ತರಬೇಕಿದೆ. ಭದ್ರಾವತಿ ಸ್ಟೀಲ್ ಫ್ಯಾಕ್ಟರಿ, HMT ಉಳಿಸೋದು ಒಂದು ಚಾಲೆಂಜ್ ನನಗೆ.
ದೇವರು ನನಗೆ ಮುಂದೆ ಇನ್ನು ದೊಡ್ಡ ಮಟ್ಟದ ಶಕ್ತಿ ಕೊಡ್ತಾನೆ ಅನ್ನೋ ನಂಬಿಕೆ ಇದೆ.
3 ಸಲ ಹೃದಯದ ಸ್ಟಂಟ್ ಬದಲಾವಣೆ ಆಗಿದೆ. ದೇವರು ನನ್ನ ಉಳಿಸಿರೋದು ನನ್ನ ಸ್ವಂತಕ್ಕಲ್ಲ ನಿಮ್ಮ ಸೇವೆಗಾಗಿ ಎಂದು ನುಡಿದರು.
ಚಲುವರಾಯಸ್ವಾಮಿ, ಸಿಎಂ ವಿರುದ್ಧ ಆಕ್ರೋಶ:
ನನ್ನ ಹಳೇ ಸ್ನೇಹಿತರು ಹೇಳ್ತಾರೆ. ಹೆಚ್ಡಿಕೆ ಗೆದ್ದವರೇ ಇನ್ನೇನು ಕಾವೇರಿ ಸಮಸ್ಯೆ ಬಗೆಹರಿಸ್ತಾರೆ ಅಂತಾರೆ.
ಅವರನ್ನ ಸ್ನೇಹಿತರು ಅನ್ನೋಕೂ ಹೋಗಲ್ಲ. ಹೆಸರೇಳದೆ ಸಚಿವ ಚಲುವರಾಯಸ್ವಾಮಿಗೆ ಟಾಂಟ್ ನೀಡಿದರು.
ಕಾವೇರಿ ವಿಚಾರವಾಗಿ ಯಾರಾದರೂ ಹೋರಾಟ ಮಾಡಿದ್ರೆ ಅದು ದೇವೇಗೌಡರು ಮಾತ್ರ. ನನಗೆ ಸ್ವಲ್ಪ ಸಮಯ ಕೊಡಿ. 120 ವರ್ಷದ ಸಮಸ್ಯೆಯನ್ನ ಒಂದೇ ತಿಂಗಳಲ್ಲಿ ಬಗೆಹರಿಸಲು ಸಾಧ್ಯವಾಗಲ್ಲ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದವ್ರೇ ಮಾಡ್ತಾರೆ ಅಂತೀರಲ್ಲ. ನಿಮ್ಮನ್ನ ಅಧಿಕಾರಕ್ಕೆ ಯಾಕೆ ಕೂರಿಸಿದ್ರು?. ವರ್ಗಾವಣೆ ದಂಧೆಯಲ್ಲಿ ಲೂಟಿ ಮಾಡು ಅಂತಾ ಕೂರಿಸಿದ್ದಾರ?. ಪರಿಶಿಷ್ಟ ವರ್ಗದ ಜನರಿಗೆ ಮೀಸಲಾದ ಹಣವನ್ನ ಲೂಟಿ ಮಾಡಿದ್ದೀರಿ. ಆ ರೀತಿಯ ಭಂಡತನದ ಮಾತುಗಳನ್ನ ನಾನು ಆಡಲ್ಲ. ಚಲುವರಾಯಸ್ವಾಮಿ, ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ಜನ ಕಟ್ಟಿರುವ ಪಕ್ಷ:
ಈ ಪಕ್ಷ ಮುಗಿಸಿದ್ದೀವಿ ಅಂದ್ರಲ್ಲ. ಲಕ್ಷಾಂತರ ಜನ ಕಟ್ಟಿರುವ ಪಕ್ಷ ಇದು. ಈ ಪಕ್ಷ ನಿರ್ನಾಮ ಮಾಡೋಕೆ ಏನೆಲ್ಲ ಹುನ್ನಾರ ಮಾಡ್ತಿದ್ದೀರಿ. ದೇವೇಗೌಡರ ಮಗನಾಗಿ ಅದನ್ನೆಲ್ಲ ಅರಿತಿದ್ದೇನೆ. ದೇವೇಗೌಡರು ಹೆಚ್ಚು ಸಮಯ ವಿಪಕ್ಷದಲ್ಲಿ ಕೆಲಸ ಮಾಡಿದ್ದಾರೆ. ದೇವೇಗೌಡರು 5 ವರ್ಷ ಅಧಿಕಾರ ಮಾಡಿದ್ರೆ ಕರ್ನಾಟಕ ಇವತ್ತು ಈ ಮಟ್ಟಿಗೆ ಇರುತ್ತಿರಲಿಲ್ಲ. ದೇವೇಗೌಡರು ಕೊನೆ ಉಸಿರು ಇರುವುದರೊಳಗೆ ಕಾವೇರಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡ್ತಿದ್ದಾರೆ. ಮೋದಿ ಜೊತೆ ಮಾತಾಡಿ ಕಾವೇರಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತಾರೆ.
ಅವರ ಬಗ್ಗೆ ಲಘುವಾಗಿ ಮಾತಾಡಬೇಡಿ. ಇವತ್ತು ಕಾಂಗ್ರೆಸ್‌ನವರು ಕೊರಗುತ್ತಿದ್ದಾರೆ. ಮುಗಿದೆ ಹೋದ ಅಂತಿದ್ದವನು ಕೇಂದ್ರದಲ್ಲಿ ಮಂತ್ರಿ ಆದ ಅಂತ. ನಾನು ಗೆದ್ದ ನಂತರ ಹೇಳಿದ್ದೆ. ಇನ್ಮೇಲೆ ರಾಜಕಾರಣ ಬೇಡ.
ಅಭಿವೃದ್ಧಿ ಪರ ಕೆಲಸ ಮಾಡೋಣ ಅಂತ. ನನಗೆ ಮತ ಕೊಟ್ಟ ಜನರ ಕಷ್ಟ ಆಲಿಸಲು ಬಂದ್ರೆ, ಅದಕ್ಕೆ ಸಹಕಾರ ಕೊಡಲಿಲ್ಲ. ಜನತಾದರ್ಶನಕ್ಕೆ ಅಧಿಕಾರಿಗಳನ್ನ ನಿಯಂತ್ರಿಸಿದರು.
ಇವತ್ತು ಸಂಜೆ 4 ಗಂಟೆಗೆ ಸಭೆ ಕರೆದಿದ್ದಾರೆ. ಅವತ್ತು ಸಭೆ ಮಾಡುವ ಅಧಿಕಾರ ಇಲ್ಲ ಅಂದ್ರಿ. ಇವತ್ತಿನ ಸಭೆಗೆ ಹೆಂಗೆ ಹೋಗಲಿ?. ಪಕ್ಕದ ಆಂಧ್ರದ ಜನ ನನ್ನನ್ನ ಕರಿತ್ತಿದ್ದಾರೆ. ಒಂದು ಕಾರ್ಖಾನೆ ಉಳಿಸಿ ಅಂತಾ ಸರ್ಕಾರ ಮನವಿ ಮಾಡ್ತಿದೆ. ಆದ್ರೆ ಇವರು ನೀವ್ಯಾಕೆ ಇಲ್ಲಿಗೆ ಬಂದ್ರಿ ಅಂತಾರೆ. ನನ್ನ ಗೆಲ್ಲಿಸಿದ ಜನರ ಸಮಸ್ಯೆ ಆಲಿಸುವುದಕ್ಕೂ ಬರಬಾರದ? ದೆಹಲಿಯಲ್ಲಿ ನನ್ನನ್ನ ಗುರುತಿಸುತ್ತಾರೆ ಅಂದ್ರೆ ಅದಕ್ಕೆ ಕಾರಣ ನೀವು.
ನಾನು ರಾಮನಗರ ಜಿಲ್ಲೆಯನ್ನೂ ಮರೆಯಲ್ಲ, ನಾಡನ್ನು ಮರೆಯೋದಿಲ್ಲ. ಗಂಡುಮೆಟ್ಟಿದ ಸ್ಥಳ ಈ ಜಿಲ್ಲೆ.
ಸ್ವಾಭಿಮಾನಕ್ಕೆ, ಗೌರವ, ಬಡತನ, ನ್ಯಾಯಕ್ಕೆ ಗೌರವ ಜನ ಇದ್ರೆ ದೇಶದಲ್ಲೇ ಮಂಡ್ಯ ಮೊದಲು ಎಂದು ಮಾತನಾಡಿದರು.
ಜಾತಿ ಹೆಸರಲ್ಲಿ ರಾಜಕೀಯ ಮಾಡಲ್ಲ:
ನೀವು ನನಗೆ ಕೊಟ್ಟ ಶಕ್ತಿಯನ್ನ ಜನರ ಋಣ ತೀರಿಸುವ ಕೆಲಸ ಮಾಡ್ತಿದ್ದೇನೆ. ಅವರಿಗೆ ಅವಕಾಶ ಕೊಟ್ಟರಲ್ಲ ಏನು ಮಾಡಿದ್ರು? ನಿಮ್ಮ ಋಣ ತೀರಿಸಿಯೇ ನಾನು ಈ ಭೂಮಿಯಲ್ಲಿ ಮಣ್ಣಾಗೋದು. ನನ್ನ ಒಕ್ಕಲಿಗ ಸಮಾಜ ದೇವೇಗೌಡ, ಕುಮಾರಸ್ವಾಮಿಯನ್ನ ಬೆಳೆಸಿದ್ದೀರಿ. ಜಾತಿ ಹೆಸರಲ್ಲಿ ನಾನು ರಾಜಕೀಯ ಮಾಡಲ್ಲ.
ಎಲ್ಲಾ ಸಮುದಾಯ, ಸಮಾಜವನ್ನ ಒಟ್ಟಿಗೆ ತೆಗೆದುಕೊಂಡು ಹೋಗ್ತೀನಿ. ಎರಡನೇ ರಾಜಕೀಯ ಭವಿಷ್ಯ ಕೊಟ್ಟಿದ್ದು ಮಂಡ್ಯ ಜಿಲ್ಲೆ. ಕುಮಾರಸ್ವಾಮಿ ಕರ್ತವ್ಯ ನಿಮಗೆ ತಂದುಕೊಡುವುದು. ನಿಖಿಲ್ ಗೆ ನಾನು ಈಗಾಗಲೇ ಹೇಳಿದ್ದೀನಿ. ದೇಶದ ಕೆಲಸ ಮಾಡುವಾಗ. ಜಿಲ್ಲೆಯ ಜನರನ್ನ ನಿರ್ಲಕ್ಷ್ಯ ಮಾಡಿದ ಮಾತು ಬರಬಾರದು. ನಾವು ಇವತ್ತು ಒಟ್ಟಾಗಿ ದೇಶದ ಪ್ರಗತಿಗೆ ಕೆಲಸ ಮಾಡ್ತೀನಿ. ವಾರದಲ್ಲಿ ಒಂದು ದಿನವಾದ್ರೂ ಮಂಡ್ಯಕ್ಕೆ ಬರ್ತೀನಿ. ನನ್ನ ಗೈರಿನಲ್ಲಿ ಮಂಡ್ಯ ಜನರ ಜೊತೆ ಇರುವಂತೆ ನಿಖಿಲ್ ಗೆ ಹೇಳಿದ್ದೇನೆ. ಸಮಸ್ಯೆ ಇದೆ ಎಂದು ಯಾರು ನಿರಾಸೆಗೆ ಒಳಗಾಗಬೇಡಿ. ನಿಮ್ಮ ಕಷ್ಟಕ್ಕೆ ನಾನು ಸದಾ ಇರ್ತೇನೆ.
ಕಾನೂನಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆಲಸಗಳನ್ನ ಮಾಡಲು ನಾನು ಸಿದ್ಧ. ನನಗೆ ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತ ಸಾರಾ ಮಹೇಶ್. ನನ್ನೊಟ್ಟಿಗೆ ಇರುವ ಯಾರು ಹಣಕಾಸಿನ ಹಿಂದೆ ಬಂದಿಲ್ಲ.
ನನ್ನ ಪ್ರೀತಿ, ವಿಶ್ವಾಸ, ಸ್ನೇಹಕ್ಕೆ ಜೊತೆ ಇದ್ದಾರೆ. ಕೆಲಸದ ಮೂಲಕ ನಿಮ್ಮ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವೆ ಎಂದು ನುಡಿದರು.
ಪುಟ್ಟರಾಜು ಭಾಷಣದ ವೇಳೆ ಮಳೆಯಾರ್ಭಟ :
ಕುಮಾರಸ್ವಾಮಿ ಮಂಡ್ಯಕ್ಕೆ ಬಂದಾಗಲೆಲ್ಲ ಮಳೆ ಬರುತ್ತೆ, ಕುಮಾರಣ್ಣ ಬಂದ್ರು ಅಂದ್ರೆ ಮಳೆ. ಮಂಡ್ಯಕ್ಕೆ ಬರ್ತಿದ್ದಂತೆ ಕನ್ನಂಬಾಡಿ ಕಟ್ಟೆ ಅರ್ಧ ತುಂಬಿತು. ಇವತ್ತು ಕಾರ್ಯಕ್ರಮಕ್ಕೆ ಬಂದಿದ್ದಾರೆ ಭರ್ಜರಿ ಮಳೆ ಬರ್ತಿದೆ.
ಇದು ಶುಭ ಸಂಕೇತದ ಸೂಚನೆಯಾಗಿದೆ. ಕಬಿನಿ ಜಲಾಶಯ ಭರ್ತಿಯಾಗಿ 20000 ಕ್ಯೂಸೆಕ್ ನೀರು ಬಿಡ್ತಿದ್ದಾರೆ ಎಂದು ಭಾಷಣದ ವೇಳೆ ಕುಮಾರಸ್ವಾಮಿಯನ್ನ ಮಾಜಿ ಸಚಿವ ಪುಟ್ಟರಾಜು ಹಾಡಿಹೊಗಳಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಹೆಚ್ಡಿಕೆ ಸಿಎಂ ಆಗಿ ನಾಡಿಗೆ ಕೊಟ್ಟ ಕೊಡುಗೆ ಮರೆಯಲಾಗಲ್ಲ. ಮೊದಲು ಸಿಎಂ ಆದಾಗ ಬಿಜೆಪಿಯವರ ಪೂರ್ಣ ಬೆಂಬಲ ಇತ್ತು. ಎರಡನೇ ಬಾರಿ ಸಿಎಂ ಆದಾಗ ಕಾಂಗ್ರೆಸ್‌ನ ಸಹವಾಸ ಬೇಡ ಎಂದು ಹೇಳಿದ್ರು. ಕಾಂಗ್ರೆಸ್ ಪಕ್ಷವನ್ನ ದೇಶದಲ್ಲೇ ಕಿತ್ತೊಗೆಯುವ ಕೆಲಸ ಆಗ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಮಂಡ್ಯ, ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ, ಜೆಡಿಎಸ್ ಗೆಲುವೇ ಸಾಕ್ಷಿ.
ಮೇಲುಕೋಟೆ ಕ್ಷೇತ್ರದ ಜನತೆ 50 ಸಾವಿರಕ್ಕೂ ಹೆಚ್ಚು ಮತ ಕೊಟ್ಟಿದ್ದೀರಿ. ಆ ಮೂಲಕ ಹೆಚ್ಚಿನ ಜವಾಬ್ದಾರಿ ಕೊಟ್ಟಿದ್ದೀರಿ. ನಿಮ್ಮ ಋಣ ತೀರಿಸುವ ಕೆಲಸವನ್ನ ಮಾಡ್ತೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಿಎಸ್ ಪುಟ್ಟರಾಜು, ಕೆ.ಸಿ.ನಾರಾಯಣ್ ಗೌಡ, ಜಿಟಿ ದೇವೇಗೌಡ, ಡಿಸಿ ತಮ್ಮಣ್ಣ, ಶಾಸಕ ಎಚ್ಟಿ ಮಂಜು, ಮಾಜಿ ಶಾಸಕರಾದ ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್, ಸೇರಿ ಹಲವರು ಭಾಗಿಯಾಗಿದ್ದಾರೆ.