ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಇಂದಿನಿಂದ ಶುರುವಾಗಿದ್ದು, ಮೊದಲ ದಿನವೇ ವಿಪಕ್ಷಗಳ ಗದ್ದಲಕ್ಕೆ ಕಲಾಪ ಬಲಿ ಆಗಿದೆ. ಉಭಯ ಸದನಗಳ ಕಲಾಪ ಬುಧವಾರಕ್ಕೆ ಮುಂದೂಡಿಕೆಯಾಗಿವೆ.
ಅಮೆರಿಕ ನ್ಯಾಯಾಲಯದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸಿತ್ತು. ಉತ್ತರಪ್ರದೇಶದ ಸಂಭಾಲ್‌ನಲ್ಲಿ ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರ ಖಂಡಿಸಿ ಎಐಎಂಐಎಂ ಸೇರಿ ವಿಪಕ್ಷಗಳು ಘೋಷಣೆ ಕೂಗಿದವು. ಪರಿಣಾಮ ಕಲಾಪ ನಡೆಸಲು ಸಾಧ್ಯವಾಗದೇ ರಾಜ್ಯಸಭೆ ಮತ್ತು ಲೋಕಸಭೆಯನ್ನು ಬುಧವಾರಕ್ಕೆ ಮುಂದೂಡಿಕೆ ಮಾಡಲಾಯಿತು.
ಅಧಿವೇಶನದ ಮೊದಲ ದಿನದಂದು ಸದನವು ಸಭೆ ಸೇರಿದ ತಕ್ಷಣ, ಮಹಾರಾಷ್ಟ್ರದ ನಾಂದೇಡ್ ಕ್ಷೇತ್ರದಿಂದ ಸದನಕ್ಕೆ ಚುನಾಯಿತರಾಗಿದ್ದ ವಸಂತರಾವ್ ಚವಾಣ್ ಮತ್ತು ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಚುನಾಯಿತರಾಗಿದ್ದ ಎಸ್ಕೆ ನೂರುಲ್ ಇಸ್ಲಾಂ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಇದಕ್ಕೂ ಮುನ್ನ ಸಂಪ್ರದಾಯದತೆ ಅಧಿವೇಶನದ ಮೊದಲ ದಿನ ಮಾತಾಡಿದ ಪ್ರಧಾನಿ ಮೋದಿ, ಜನರಿಂದ ತಿರಸ್ಕರಿಸಲ್ಪಟ್ಟ ಕೆಲವರು, ಗೂಂಡಾಗಿರಿ ಮೂಲಕ ಸಂಸತ್ ನಿಯಂತ್ರಿಸಲು ನೋಡುತ್ತಿದ್ದಾರೆ. ಇದನ್ನು ಇಡೀ ದೇಶದ ಜನ ನೋಡುತ್ತಿದ್ದಾರೆ. ಕಲಾಪಕ್ಕೆ ಅಡ್ಡಿಪಡಿಸುವವರಿಗೆ ಪ್ರಜೆಗಳು ಸಮಯ ನೋಡಿಕೊಂಡು ಶಿಕ್ಷೆ ನೀಡುತ್ತಾರೆ ಎಂದು ಹೇಳಿದರು.
ಸ್ಪೀಕರ್ ಓಂ ಬಿರ್ಲಾ ಮಾತನಾಡಿ, ರಾಜಕೀಯದಿಂದ ಸಂವಿಧಾನವನ್ನು ದೂರ ಇಡುವಂತೆ ಮನವಿ ಮಾಡಿದರು.