ರಾಮನಗರ: ಮಕ್ಕಳು ಕರಾಟೆ, ಕುಸ್ತಿ, ಮಲ್ಲಕಂಬ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ತಿಳಿಸಿದರು. ಅವರು ಇಂದು ನಗರದ ರಾಮದೇವರ ಬೆಟ್ಟದ ರಸ್ತೆಯಲ್ಲಿರುವ ಸಾಹಸ ಕಲಾ ಶಿಕ್ಷಣ ಕೇಂದ್ರದ ಪದ್ಮಶ್ರೀ ಬಿ. ವಿ. ಕಾರಂತ್ ರಂಗಮಂದಿರದಲ್ಲಿ ಕರ್ನಾಟಕ ಸಾಹಸ ಕಲಾ ಅಕಾಡಮಿ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ರಾಮನಗರ ಜಿಲ್ಲಾ ಖೇಲೋ ಇಂಡಿಯಾ ಕ್ರೀಡಾ ಕೇಂದ್ರದಲ್ಲಿ ಕುಸ್ತಿ ಮತ್ತು ಮಲ್ಲಕಂಬ ತರಬೇತಿ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಶಿಕ್ಷಣಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೋ ಅಷ್ಟೆ ಪ್ರಾಮುಖ್ಯತೆಯನ್ನು ಕ್ರೀಡೆಗೂ ಸಹ ನೀಡಬೇಕು. ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಜಿಲ್ಲೆಗೆ ಹೆಸರು ತರಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ದೇಸಿ ಕ್ರೀಡೆಗಳಾದ ಕುಸ್ತಿ, ಮಲ್ಲಕಂಬ, ದೊಣ್ಣೆವರಸೆಯಂತಹ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಹಾಗೂ ಇದರ ಪ್ರಯೋಜನಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು ಅವರು ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ದೇಸಿ ಕ್ರೀಡೆಗಳು ಕಣ್ಮರೆಯಾಗಿದೆ. ಈಗಿನ ಪೀಳಿಗೆಯ ಕ್ರೀಡಾ ಪಟುಗಳು ಇಂತಹ ದೇಸಿ ಕ್ರೀಡೆಗಳಲ್ಲಿ ಭಾಗವಹಿಸಿ ಮುಂದಿನ ಪೀಳಿಗೆಯವರೆಗೂ ದೇಸಿ ಕ್ರೀಡೆಗಳು ಉಳಿಸಿ ಬೆಳೆಸುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ, ಸಾಂಪ್ರದಾಯಿಕ ಸಮರ ಕಲೆಗಳ ಮಹಾಗುರುಗಳಾದ ಹಾಸನ್ ರಘು ಸೇರಿದಂತೆ ಕ್ರೀಡಾಪಟುಗಳು ಹಾಗೂ ಇತರರು ಉಪಸ್ಥಿತರಿದ್ದರು.
