ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್ .ನಗರ : ಒಕ್ಕಲಿಗ ಸಮುದಾಯದ ಮುಖಂಡರು ಜಾಗೃತಿಯಿಂದ ಸಮೀಕ್ಷಾ ಕಾರ್ಯಗಳಲ್ಲಿ ಪಾಲ್ಗೊಂಡು ನಿಖರವಾದ ಮಾಹಿತಿ ಒದಗಿಸುವಂತೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮ್ ಮನವಿ ಮಾಡಿದರು.
ಸಾಲಿಗ್ರಾಮದ ಎಸ್ ಎಲ್ ಆರ್ ಕಲ್ಯಾಣ ಮಂಟಪದಲ್ಲಿ ನಡೆದ ಜಾತಿಗಣತಿ ಜಾಗೃತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘದ ವತಿಯಿಂದ ತಾಲೂಕಿನ ವ್ಯಾಪ್ತಿಯಲ್ಲಿ ಗಣತಿ ಕಾರ್ಯ ವಿಧಾನಗಳನ್ನು ತಿಳಿಸುವ ಕೆಲಸ ಆಗುತ್ತಿದ್ದು ಹೋಬಳಿ ಮಟ್ಟದಲ್ಲಿ ಸಂಘದ ವತಿಯಿಂದಲೇ ಸ್ವಯಂಸೇವಕರನ್ನು ನೇಮಿಸಿ ಸಮೀಕ್ಷಾ ಕಾರ್ಯದಿಂದ ಸಮುದಾಯದ ಯಾವುದೇ ಕುಟುಂಬ ಹೊರಗುಳಿಯದಂತೆ ಎಚ್ಚರಿಕೆ ವಹಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಯುವಕರು ಮತ್ತು ಸಮುದಾಯದ ಮುಖಂಡರು ಸ್ವಯಂ ಪ್ರೇರಿತರಾಗಿ ಸಮೀಕ್ಷಾ ಸಮಯದಲ್ಲಿ ಯಾರೂ ಹೊರಗುಳಿಯದೆ ಸಕ್ರಿಯವಾಗಿ ದಾಖಲು ಮಾಡಿಕೊಳ್ಳಬೇಕು. ಜಾತಿ ಸಮೀಕ್ಷೆ ಸಮುದಾಯದ ಮುಂದಿನ ಪೀಳಿಗೆಯ ಮಕ್ಕಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದ್ದು ಒಕ್ಕಲಿಗ ಜಾತಿಯವರಿಗೆ ದಕ್ಕ ಬೇಕಿರುವ ಮೀಸಲಾತಿಯನ್ನು ಪಡೆಯಲು ಇದು ಅನುಕೂಲಕರವಾಗಿದೆ ಎಂದರು.
ಉಪಾಧ್ಯಕ್ಷ ಹೊಸೂರು ಕುಚೆಲ್ ಮಾತನಾಡಿ ಸಂಘದ ವತಿಯಿಂದ ಸಾಲಿಗ್ರಾಮ ಮತ್ತು ಕೆ ಆರ್ ನಗರ ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಹಾಗೂ ಜಾತಿಗಣತಿಯ ವಿಚಾರದಲ್ಲಿ ಯಾವುದೇ ಅನುಮಾನಗಳಿದ್ದರೆ ಸಂಘದ ನಿರ್ದೇಶಕರು ಮತ್ತು ಸಮುದಾಯದ ಮುಖಂಡರನ್ನು ಸಂಪರ್ಕಿಸಿ ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ರಾಮಲಿಂಗು,ನಿರ್ದೇಶಕರಾದ ರವೀಂದ್ರ,ರಾಧಾಕೃಷ್ಣ, ಖಜಾಂಚಿ ಸಂಪತ್ ಮಾಜಿ ಅಧ್ಯಕ್ಷ ತಮ್ಮಯ್ಯ,ಸಾಲಿಗ್ರಾಮ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಮಹೇಶ್, ಗೌರವ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ಮುಖಂಡರಾದ ಮೆಡಿಕಲ್ ರಾಜಣ್ಣ, ಕುಪ್ಪಳ್ಳಿ ಸೋಮು, ಹೇಮಂತ್,ಕೃಷ್ಣಪ್ಪ, ವೈನ್ಸ್ ರಾಜು, ಅನಂತ್, ನಾಗೇಶ್, ತೋಟ ರಾಮಕೃಷ್ಣ,ಸತೀಶ್, ರಾಂಪುರ ಪುರುಷೋತ್ತಮ, ಮಂಜುನಾಥ್, ಮಹಾದೇವ, ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದರು.