ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಈ ತಿಂಗಳ ೨೭ರಂದು ರಾಜ್ಯಧಾನಿಯ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ನಡೆಯಲಿದ್ದು ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಸಿ.ಜೆ. ಅರುಣ್ ಕುಮಾರ್ ಮನವಿ ಮಾಡಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯಾಧ್ಯಕ್ಷ ಷಡಕ್ಷರಿ ನೇತೃತ್ವದಲ್ಲಿ ನಡೆಯುತ್ತಿರುವ ಮಹಾ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ ಮಾಡಲಿದ್ದು ಸಚಿವರು ಶಾಸಕರು ಸೇರಿದಂತೆ ವಿವಿಧ ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಓ.ಓ.ಡಿ ಸೌಲಭ್ಯವಿದ್ದು ಬಸ್ ವ್ಯವಸ್ಥೆ ಸೇರಿದಂತೆ ಎಲ್ಲಾ ಸದಸ್ಯರಿಗೂ ಕಾರ್ಯಕ್ರಮಕ್ಕೆ ಹೋಗಿ ಬರುವ ವ್ಯವಸ್ಥೆಯನ್ನು ಮಾಡಲಾಗಿದೆ ಆದ್ದರಿಂದ ತಾಲೂಕಿನ ಎಲ್ಲಾ ಇಲಾಖೆಯ ನೌಕರರು ಸಮ್ಮೇಳನದಲ್ಲಿ ಭಾಗವಹಿಸಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಒಗ್ಗಟ್ಟು ತೋರಿಸಬೇಕೆಂದು ಮನವಿ ಮಾಡಿದರು.
ನಮ್ಮ ಹಕ್ಕು ನೆಮ್ಮದಿಯ ಬದುಕಿಗಾಗಿ ನಮ್ಮ ಬೇಡಿಕೆಗಳು ಈಡೇರಲೇಬೇಕು ಹಳೆ ಪಿಂಚಣಿ ಯೋಜನೆ ಮರುಜಾರಿ ೭ನೇ ವೇತನ ಆಯೋಗದ ವರದಿಯ ಅನುಷ್ಠಾನ ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಸೇರಿದಂತೆ ಇತರ ಸಮಸ್ಯೆಗಳ ನೌಕರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಈ ಸಮ್ಮೇಳನದಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹಕ್ವತ್ತಾಯ ಮಾಡಲಾಗುವುದು ಆದ್ದರಿಂದ ತಾಲೂಕಿನ ಎಲ್ಲಾ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಪರಿಷತ್ ಸದಸ್ಯ ಕೆ.ವಿ.ರಮೇಶ್ ಸಂಘದ ಗೌರವ ಅಧ್ಯಕ್ಷ ಗೋಪಾಲ್ ಖಜಾಂಚಿ, ಪ್ರಸನ್ನ, ಕಿತ್ತೂರು ಆನಂದ್ ಸೇರಿದಂತೆ ಇನ್ನಿತರರು ಹಾಜರಿದ್ದರು.