ಪಿರಿಯಾಪಟ್ಟಣ: ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ವತಿಯಿಂದ ಮೈಸೂರು ಜಿಲ್ಲಾ ಬಿಜಿಎಸ್ ಅಂತರ ಶಾಲಾ ಮತ್ತು ಕಾಲೇಜು ಕ್ರೀಡಾಕೂಟ ನಡೆಯಿತು. ಆದಿಚುಂಚನಗಿರಿ ಮೈಸೂರು ಶಾಖಾಪೀಠದ ಶ್ರೀ ಸೋಮನಾಥೇಶ್ವರ ಸ್ವಾಮಿಜಿಯವರು ಆಶೀರ್ವಚನ ನೀಡಿ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ ಜೊತೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮಲ್ಲಿನ ಪ್ರತಿಭೆ ಹೊರ ತಂದು ಸಾಧನೆ ತೋರುವಂತೆ ತಿಳಿಸಿದರು.
ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್ ಅವರು ಮಾತನಾಡಿ ಕ್ರೀಡೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ,
ಕ್ರೀಡೆ ಎಂಬುದು ಸಂಘಟಿತ ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ ಎಂದು ತಿಳಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದರು.
ತಹಶೀಲ್ದಾರ್ ಕುಂ ಇ ಅಹಮದ್ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು, ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಕ್ರೀಡಾ ಸ್ಪೂರ್ತಿ ಮೆರೆಯುವಂತೆ ತಿಳಿಸಿದರು. ಈ ಸಂದರ್ಭ ಬಿಇಓ ಬಸವರಾಜು, ಬಿಜಿಎಸ್ ಸಂಸ್ಥೆ ಆಡಳಿತಾಧಿಕಾರಿ ಸುಧಾಕರ್, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ನಟರಾಜ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗೋವಿಂದೇಗೌಡ,. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಆರ್ ಪ್ರವೀಣ್, ಮುಖ್ಯ ಶಿಕ್ಷಕಿ ದಿವ್ಯ ಹಾಗೂ ಸಂಸ್ಥೆಯ ಉಪನ್ಯಾಸಕರು ದೈಹಿಕ ಶಿಕ್ಷಕರು ಇದ್ದರು.
