ನವದೆಹಲಿ: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿರುವುದನ್ನು ಶ್ಲಾಘಿಸಿರುವ ಬಿಆರ್‌ಎಸ್ ನಾಯಕಿ ಕೆ. ಕವಿತಾ, ಒಬಿಸಿ ಮಹಿಳೆಯರ ಹಿತಾಸಕ್ತಿಗಳ ರಕ್ಷಣೆಗೆ ಮತ್ತು ಅವರಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವನ್ನು ಐತಿಹಾಸಿಕ ಎಂದು ಬಣ್ಣಿಸಿದ ಅವರು, ಇದು ಪ್ರಜಾಪ್ರಭುತ್ವ, ಸಮಾನತೆ ಮತ್ತು ಪ್ರತಿಯೊಬ್ಬ ಭಾರತೀಯ ಮಹಿಳೆಯ ಸಾಮರ್ಥ್ಯದ ಗೆಲುವು ಎಂದು ಹೇಳಿದರು.
ಈ ತಿಂಗಳ ಆರಂಭದಲ್ಲಿ, ಮಸೂದೆಗಾಗಿ ಒಗ್ಗೂಡುವಂತೆ ಅವರು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದರು. ಮಸೂದೆಯನ್ನು ಬೆಂಬಲಿಸಿ ಈ ವರ್ಷದ ಮಾರ್ಚ್‌ನಲ್ಲಿ ಕವಿತಾ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು ಗಮನಾರ್ಹ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕಾಯ್ದಿರಿಸುವ ಬಹುನಿರೀಕ್ಷಿತ ಮಸೂದೆಗೆ ರಾಜ್ಯಸಭೆ ಸರ್ವಾನುಮತದಿಂದ ಅನುಮೋದನೆ ನೀಡಿದೆ.
ಮಹಿಳಾ ಮೀಸಲಾತಿ ಮಸೂದೆಯು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ, ಬದಲಾಗಿ ಇದು ಮಹಿಳೆಯರ ಪ್ರಗತಿ, ಪ್ರಾತಿನಿಧ್ಯ ಮತ್ತು ಅಡೆತಡೆಗಳನ್ನು ನಿವಾರಿಸುವ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ನಮ್ಮ ಬಹುಸಂಖ್ಯೆಯ ಮಹಿಳೆಯರ ಧ್ವನಿಗಳು ನಮ್ಮ ಪ್ರೀತಿಯ ತಾಯ್ನಾಡಿನ ಉಜ್ವಲ ಭವಿಷ್ಯವನ್ನು ರೂಪಿಸುವ ಹೆಜ್ಜೆ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ ಮುಂದಿನ ಚುನಾವಣೆಯಿಂದಲೇ ಮಹಿಳಾ ಮೀಸಲಾತಿ ಜಾರಿಗೆ ಬರುತ್ತಿಲ್ಲ ಎಂಬ ವಿಚಾರದಲ್ಲಿ ಕವಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ ೩೩ ರಷ್ಟು ಮೀಸಲಾತಿ ನೀಡುವ ಮಹಿಳಾ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿದ್ದಕ್ಕಾಗಿ ಅವರು ದೇಶಾದ್ಯಂತದ ಮಹಿಳೆಯರನ್ನು ಅಭಿನಂದಿಸಿದ್ದು, ಜಗತ್ತಿನಲ್ಲಿ ಅರ್ಧದಷ್ಟು ಇರುವ ಮತ್ತು ಅರ್ಧದಷ್ಟು ಅವಕಾಶಗಳನ್ನು ಹೊಂದಿರುವ ಮಹಿಳೆಯರಿಗೂ ಅರ್ಧದಷ್ಟು ಅಧಿಕಾರ ಇರಬೇಕು ಎಂದು ಅವರು ಹೇಳಿದ್ದಾರೆ.