ಪಾಂಡವಪುರ : ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಮೃತಪಟ್ಟಿರುವ ಘಟನೆ ಪಾಂಡವಪುರ ಬಸ್ ನಿಲ್ದಾಣದ ಬಳಿ ಸೋಮವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಚಿನಕುರಳಿ ಹೋಬಳಿ ರಾಗಿಮುದ್ದನಹಳ್ಳಿ ಗ್ರಾಮದ ಎಂ.ಬಿ.ಶಿವಣ್ಣ ಎಂಬವರ ಮಗ, ೩೦ ವರ್ಷದ ಅಶೋಕ ಎಂಬವರು ಮೃತಪಟ್ಟ ವ್ಯಕ್ತಿ.
ಮೃತ ಅಶೋಕ ತಮ್ಮ ತಾಯಿ ಲಕ್ಷ್ಮಿ ಅವರ ಜತೆ ಸಂಜೆ ಸುಮಾರು ೬.೩೦ಕ್ಕೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ (ಕೆಎ-೦೯-೫೫೨೯) ಚಿನಕುರಳಿಯಿಂದ ಪಾಂಡವಪುರ ಮಾರ್ಗವಾಗಿ ಮೈಸೂರಿಗೆ ಹೊರಟ್ಟಿದ್ದರು ಎನ್ನಲಾಗಿದೆ. ಬಸ್ಸು ಪಾಂಡವಪುರ ಸಮೀಪಿಸುತ್ತಿದ್ದಂತೆ ಅಶೋಕಾ ಅವರು ನಿತ್ರಾಣಗೊಂಡು ಕುಸಿದು ಬಿದ್ದರು. ಕೂಡಲೇ ಅವರ ತಾಯಿ ಅವರನ್ನು ಇತರೆ ಪ್ರಯಾಣಿಕರ ಸಹಾಯದಿಂದ ಪಾಂಡವಪುರ ಬಸ್ ನಿಲ್ದಾಣದಲ್ಲಿ ಇಳಿಸಿಕೊಂಡರು. ಸ್ಥಳದಲ್ಲಿದ್ದ ಸಾರ್ವಜನಿಕರು ಪರೀಕ್ಷಿಸಿ ಅವರು ಈಗಾಗಲೇ ಮೃತರಾಗಿದ್ದಾರೆಂದು ಹೇಳಿದಾಗ ಮೃತ ವ್ಯಕ್ತಿಯ ತಾಯಿ ರೋಧಿಸಿದರು.