ಬೆಂಗಳೂರು: ಪ್ರಯಾಣ ದರ ಏರಿಕೆ ಬಳಿಕ ಬೆಂಗಳೂರು ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದ್ದು, ಬರೊಬ್ಬರಿ ೨.೩ ಲಕ್ಷ ಮಂದಿ ಓಡಾಟ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ದರ ಏರಿಕೆಯ ಮೊದಲು ಪ್ರತಿದಿನ ಸುಮಾರು ೮.೫ ಲಕ್ಷ ಪ್ರಯಾಣಿಕರು ನಿಯಮಿತವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ದರ ಏರಿಕೆ ಬಳಿಕ ಈ ಪ್ರಮಾಣ ೬.೩ ಲಕ್ಷಕ್ಕೆ ಇಳಿಕೆಯಾಗಿದೆ. ಆ ಮೂಲಕ ಬರೊಬ್ಬರಿ ೨.೩ ಲಕ್ಷ ಮಂದಿ ಓಡಾಟ ಇಳಿಕೆಯಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಫೆಬ್ರವರಿ ೮ ರಂದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಗಳು ಪ್ರಯಾಣ ದರವನ್ನು ಸುಮಾರು ಶೇ. ೧೦೦ ರಷ್ಟು ಹೆಚ್ಚಿಸಿದ್ದರು. ಇದರ ಜೊತೆಗೆ, ಬಿಎಂಆರ್‌ಸಿಎಲ್ ಪೀಕ್ ಅವರ್ ಸಮಯದಲ್ಲಿ ಶೇ. ೫ ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ಪ್ರಾರಂಭಿಸಿತ್ತು. ದರ ಏರಿಕೆ ಜಾರಿಗೆ ಬಂದ ದಿನದಿಂದ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬಂದಿದ್ದು, ಹತ್ತು ದಿನಗಳ ನಂತರ, ಪ್ರಯಾಣಿಕರ ಸಂಖ್ಯೆ ದಿನಕ್ಕೆ ೬.೩ ಲಕ್ಷಕ್ಕೆ ಇಳಿಕೆಯಾಗಿದೆ ಎನ್ನಲಾಗಿದೆ.
ದರ ಹೆಚ್ಚಳದಿಂದ ನಿರೀಕ್ಷಿತ ಆದಾಯ ಕುಸಿತ: ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು ೨.೩ ಲಕ್ಷ ಇಳಿಕೆಯಾಗಿದ್ದು, ಈ ದರ ಹೆಚ್ಚಳದಿಂದ ನಿರೀಕ್ಷಿತ ಆದಾಯವನ್ನು ಸಾಧಿಸಲಾಗಿಲ್ಲ ಎನ್ನಲಾಗಿದೆ. ಫೆಬ್ರವರಿ ೯ ರಂದು ಹೆಚ್ಚಳ ಜಾರಿಗೆ ಬರುವ ಮೊದಲು ಬಿಎಂಆರ್ ಸಿಎಲ್ ಗೆ ಇದ್ದ ಆದಾಯಕ್ಕೆ ಹೋಲಿಸಿದರೆ ಹಾಲಿ ಅಂದರೆ ಟಿಕೆಟ್ ದರ ಹೆಚ್ಚಳದ ಬಳಿಕದ ಆದಾಯ ಕಡಿಮೆಯಾಗಿದೆ. ಬಿಎಂಆರ್‌ಸಿಎಲ್ ಕೆಲವು ವಿಭಾಗಗಳಲ್ಲಿ ಶೇ. ೧೦೦ ಕ್ಕಿಂತ ಹೆಚ್ಚು ಬದಲಾಗಿ ಶೇ. ೭೧ ರಷ್ಟು ಮೆಟ್ರೋ ರೈಲು ದರ ಹೆಚ್ಚಳಕ್ಕೆ ಮಿತಿ ಹೇರಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತ್ತೆ ಪರಿಶೀಲನಾ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರಿಗೆ ಕೆಲವು ವಿಭಾಗಗಳಲ್ಲಿ ದರ ಏರಿಕೆ ಶೇ. ೧೦೦ ಕ್ಕಿಂತ ಹೆಚ್ಚಾಗಿದ್ದರಿಂದ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಿರ್ದೇಶಿಸಿದ ನಂತರ ಬಿಎಂಆರ್‌ಸಿಎಲ್ ತನ್ನ ದರ ಏರಿಕೆಯನ್ನು ಮರುಪರಿಶೀಲಿಸಲು ನಿರ್ಧರಿಸಿತ್ತು. ಇದೀಗ ಮೆಟ್ರೋ ರೈಲು ಅಧಿಕಾರಿಗಳು ಮಾರ್ಚ್ ೧ ರಂದು ದರ ಏರಿಕೆಯ ಪರಿಣಾಮದ ಕುರಿತು ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.