Friday, April 11, 2025
Google search engine

Homeರಾಜ್ಯಹಿಂದಿನ ಸಿದ್ದರಾಮಯ್ಯನವರು ಕಳೆದು ಹೋಗಿದ್ದಾರೆ: ವಿ.ಸೋಮಣ್ಣ

ಹಿಂದಿನ ಸಿದ್ದರಾಮಯ್ಯನವರು ಕಳೆದು ಹೋಗಿದ್ದಾರೆ: ವಿ.ಸೋಮಣ್ಣ

ಮಂಗಳೂರು: ಈ ಹಿಂದಿನ ಸಿದ್ದರಾಮಯ್ಯನವರು ಕಳೆದು ಹೋಗಿದ್ದಾರೆ. ನಾನು‌ ಅವರ ಜತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಆ ಸಿದ್ದರಾಮಯ್ಯನವರು ಇವತ್ತು ಇಲ್ಲ. ಇವತ್ತು ಇರುವ ಬಗ್ಗೆ ನನಗೂ ಒಂದು ರೀತಿ ಅನುಮಾನ ಆಗಿದೆ ಎಂದು ಕೇಂದ್ರ ರೈಲ್ವೇ ,ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣ ವಿಚಾರದ ಕುರಿತು ಪ್ರತಿಕ್ರಿಯಿಸಿದರು. ‘ವಾಸ್ತವಾಂಶ ಯಾರೂ ಮುಚ್ಚಿ ಹಾಕಲು ಆಗಲ್ಲ. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿಯುತ್ತೆ ಎಂದು ಯಾರು ಅರ್ಥ ಮಾಡಿಕೊಳ್ಳಲ್ಲ, ಅವರು ಅರ್ಥ ಮಾಡಿಕೊಳ್ಳಬೇಕು. ಬೇರೆಯವರ ಬಗ್ಗೆ ಹೇಗೆ ನಡೆದುಕೊಂಡರು ಏನಾಯಿತು ಅನ್ನೊದಕ್ಕಿಂತ ಸಿದ್ದರಾಮಯ್ಯನವರು ಅವರೇನಾ ಎಂಬ ಸಂಶಯ ಆಗುತ್ತಿದೆ. ಅದನ್ನು ಅವರು‌ ತಿದ್ದಿಕೊಂಡು ಜನರಿಗೆ ವಾಸ್ತವಾಂಶ ಏನೆಂದು ತಿಳಿಸಲಿ. ಆಗ ಅವರು ಹಳೆ ಸಿದ್ದರಾಮಯ್ಯ ಆಗುತ್ತಾರೆ’ ಎಂದರು.

ರೈಲ್ವೆ ಅಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲು ಮಂಗಳೂರಿಗೆ ಆಗಮಿಸಿರುವ ವಿ. ಸೋಮಣ್ಣ ಬುಧವಾರ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಭೇಟಿ ನೀಡಿದರು. ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಮೇಲ್ದರ್ಜೆ ಗೆ 2 ತಿಂಗಳೊಳಗೆ ರೂಪುರೇಷೆ ತಯಾರಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರ ನಡುವೆ ಮಂಗಳೂರು- ಕಾರವಾರ ಭಾಗದಲ್ಲಿ ರೈಲ್ವೇ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಈ ನಿಟ್ಟಿನಲ್ಲಿ ಎರಡು ತಿಂಗಳೊಳಗೆ ತಜ್ಞರು, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಗ್ಗೂಡಿಸಿಕೊಂಡು ನೀಲನಕ್ಷೆ ತಯಾರಿಸಲಾಗುವುದು ಎಂದು ಹೇಳಿದರು.

ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಸಚಿವರಿಗೆ ಮಂಗಳೂರು ಸೆಂಟ್ರಲ್ ರೈಲ್ವೇ ಆಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.

ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಮೇಯರ್ ಸುಧೀರ್ ಶೆಟ್ಟಿ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಾರ್ ರೂಂ ಮಾಡಿದ್ದೇವೆ

ಉತ್ತರ ಕನ್ನಡದ ಶಿರೂರು ಬಳಿ‌ ಹೆದ್ದಾರಿ ಮೇಲೆ ಗುಡ್ಡ ಕುಸಿತದ ಬಳಿಕ ರೈಲ್ವೇ ಮಾರ್ಗಗಳ ಮೇಲೂ ಗುಡ್ಡ ಕುಸಿತದ ಆತಂಕ ಎದುರಾಗಿರುವ ಕುರಿತು ಪ್ರತಿಕ್ರಿಯಿಸಿ ‘ರೈಲ್ವೇ ಇಲಾಖೆಯಿಂದ ನಮ್ಮದೆ ಆದ ವ್ಯವಸ್ಥೆಯಲ್ಲಿ ಪಾಕೃತಿಕ ವಿಕೋಪ ನಿರ್ವಹಣೆ ಮಾಡುತ್ತೇವೆ. NDRF, SDRF ಯಾವ ರೀತಿ ಇದೆಯೋ‌ ಅದಕ್ಕಿಂತ ವಿಭಿನ್ನವಾಗಿ ನಮ್ಮ ಇಲಾಖೆಯಲ್ಲಿ ವ್ಯವಸ್ಥೆಗಳಿವೆ. ಇದಕ್ಕಾಗಿ ವಾರ್ ರೂಂ ಮಾಡಿದ್ದೇವೆ. ಪ್ರತಿಯೊಂದು ಕಡೆಗಳಲ್ಲೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ’ ಎಂದರು.

‘ಈ ಬಾರಿ ಮಳೆ ತುಂಬಾ ಹೆಚ್ಚಾಗುತ್ತಿದೆ. ಜಿಲ್ಲಾಧಿಕಾರಿಗಳ ಜತೆ ನಮ್ಮವರು‌ ಸಹ ಕೈಜೋಡಿಸಿ ತತ್ ಕ್ಷಣ ಸಮರೋಪಾದಿ ಕೆಲಸ ನಡೆಯುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಕೇಂದ್ರ ರೈಲ್ವೇ ಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ. ಎಂತಹ ಮಳೆ ಬಂದರು. ಗೂಡ್ಸ್, ಪ್ಯಾಸೆಂಜರ್ ರೈಲುಗಳು ನಿಲ್ಲಬಾರದು’ ಎಂದರು.

RELATED ARTICLES
- Advertisment -
Google search engine

Most Popular