ನವದೆಹಲಿ: ಪತ್ರಿಕೆಗಳಲ್ಲಿ ಕ್ಷಮಾಪಣೆಯನ್ನು ಪ್ರಕಟಿಸಬೇಕು ಎಂದು ಭಾರತೀಯ ವೈದ್ಯಕೀಯ ಅಸೋಸಿಯೇಶನ್‌ನ ಮುಖ್ಯಸ್ಥರಿಗೆ ಸುಪ್ರೀಂಕೋರ್ಟ್ ಮಂಗಳವಾರ ಸೂಚನೆ ನೀಡಿದೆ. ಅಲ್ಲದೇ ಇದನ್ನು ಅವರ ಸ್ವಂತ ಹಣದಲ್ಲಿ ಮಾಡಬೇಕು, ಸಂಸ್ಥೆಯ ಭಂಡಾರವನ್ನು ಬಳಕೆ ಮಾಡಿಕೊಳ್ಳಬಾರದು ಎಂದು ಸೂಚಿಸಿದೆ.
ನ್ಯಾಯಾಲಯದ ವಿರುದ್ಧ ಹೇಳಿಕೆ ನೀಡಿರುವುದನ್ನು ಖಂಡಿಸಿ ಕ್ಷಮೆ ಕೇಳುವಂತೆ ಡಾ.ಆರ್.ವಿ.ಅಶೋಕನ್ ರಿಗೆ ಕೋರ್ಟ್ ಸೂಚಿಸಿತ್ತು. ಆದರೆ ಕೇವಲ ಆನ್ಲೈನ್ (ಇ-ಪೇಪರ್)ನಲ್ಲಿ ಮಾತ್ರ ಕ್ಷಮಯಾಚನೆ ಜಾಹೀರಾತು ಪ್ರಕಟಿಸಿದ್ದಕ್ಕೆ ಕೋಪಗೊಂಡಿರುವ ಕೋರ್ಟ್, ಹೆಚ್ಚಿನ ಸಮಸ್ಯೆಯನ್ನು ಆಹ್ವಾನಿಸುತ್ತಿದ್ದೀರಿ ಎಂದಿದೆ. ಅಲ್ಲದೇ ನಿಮ್ಮ ಸಂದರ್ಶನ ಪ್ರಕಟವಾಗಿರುವ ಎಲ್ಲಾ ಪತ್ರಿಕೆಗಳಲ್ಲಿ ಕ್ಷಮಾಪಣೆ ಪ್ರಕಟವಾಗಬೇಕು. ಇದಕ್ಕಾಗಿ ನಿಮ್ಮ ಸ್ವಂತ ಹಣವನ್ನು ಖರ್ಚು ಮಾಡಬೇಕು ಎಂದು ಸೂಚಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಆ.27ಕ್ಕೆ ಮುಂದೂಡಿದೆ. ಬಾಬಾ ರಾಮದೇವ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಅಶೋಕನ್, ವೈದ್ಯಕೀಯ ಹುದ್ದೆಯಲ್ಲಿರುವ ವ್ಯಕ್ತಿಯ ಬಗ್ಗೆ ಸುಪ್ರೀಂಕೋರ್ಟ್ ವಿಶಾಲವಾದ ನಿಲುವು ತಳೆಯುವುದು ಸೂಕ್ತವಲ್ಲ ಎಂದಿದ್ದರು.