ಋತು ಬದಲಾದಂತೆ ಆ ಋತುವಿಗೆ ತಕ್ಕಂತೆ ಜೀವನಶೈಲಿ ಬದಲಾಯಿಸಿ ಕೊಳ್ಳಬೇಕು. ಜೀವನಶೈಲಿಯಲ್ಲಿ ಬದಲಾ ವಣೆ ಮಾಡಿಕೊಳ್ಳದೇ ಇದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದೀಗ ಮಳೆಗಾಲ ಆರಂಭವಾಗಿದೆ. ಚಳಿಗಾಲ, ಬೇಸಗೆಕಾಲಕ್ಕಿಂತಲೂ ಹೆಚ್ಚಿನ ಕಾಳಜಿ ಮಳೆಗಾಲದಲ್ಲಿ ಅಗತ್ಯವಿದೆ. ಮಳೆಯನ್ನು ಸಂಭ್ರಮಿಸುವುದರೊಂದಿಗೆ ಆರೋಗ್ಯದ ಕಡೆಗೂ ಗಮನಹರಿಸಬೇಕು.
ಸಾಮಾನ್ಯವಾಗಿ ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳೂ ಹೆಚ್ಚು. ಈ ವೇಳೆ ತೇವಾಂಶದ ಪ್ರಮಾಣ ಹೆಚ್ಚಾಗಿರುವುದರಿಂದ ದೇಹದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನೀರಿನಿಂದ ಹರಡುವ ರೋಗಗಳಾದ ಡಯೇರಿಯಾ, ಕಾಲರಾ, ಜಠರ ಸಮಸ್ಯೆ, ಭೇದಿ ಹಾಗೂ ಸಾಮಾನ್ಯ ಶೀತ, ಜ್ವರ ಮತ್ತು ಸೊಳ್ಳೆಗಳಿಂದ ಉಂಟಾಗುವ ಡೆಂಘೀ ಮತ್ತು ಮಲೇರಿಯಾ ಮಳೆಗಾಲದ ಸಾಮಾನ್ಯ. ಹೀಗಾಗಿ ಆರೋಗ್ಯ ಸಮಸ್ಯೆಗಳಾಗಿವೆ. ಮಳೆಗಾಲದ ಸೋಂಕಿನಿಂದ ದೂರವಿರಲು ಮುನ್ನೆಚ್ಚರಿಕೆ ಕ್ರಮ ಅತೀ ಮುಖ್ಯವಾಗಿದೆ.
ಸುತ್ತಮುತ್ತಲಿನ ಪರಿಸರ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ. ನಾವು ಇರುವಲ್ಲಿ ನೀರು ನಿಂತಿದ್ದರೆ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವುದು. ಸೊಳ್ಳೆಗಳಿಂದ ರೋಗಗಳು ಹರಡುತ್ತವೆ. ಪರಿಸರದಲ್ಲಿ ನೀರು ನಿಲ್ಲದಂತೆ ಕಾಳಜಿವಹಿಸ ಬೇಕಾಗುತ್ತದೆ. ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ ಅಥವಾ ಕಿಟಕಿಗಳಿಗೆ ಸೊಳ್ಳೆ ಪರೆದಯನ್ನು ಹಾಕಿ, ಮನೆಗೆ ಸೊಳ್ಳೆ ಪ್ರವೇಶಿಸದಂತೆ ತಡೆಯಿರಿ. ಸೊಳ್ಳೆಗಳಿಂದ ಡೆಂಗ್ಯು, ಮಲೇರಿಯ, ಚಿಕನ್ ಗುನ್ಯಾ, ಆನೆ ಕಾಲು ರೋಗಗಳು ಮತ್ತು ನೊಣಗಳಿಂದ ಕಾಲರಾ ಹರಡುತ್ತದೆ.
ಮುನ್ನೆಚ್ಚರಿಕೆಗಳು ಕ್ರಮ ಸೂಕ್ತ ಆಹಾರ ಸೇವಿಸಿ
ಮನೆ ಮದ್ದು
ಮಳೆಗಾಲದಲ್ಲಿ ಶೀತ, ಕೆಮ್ಮು , ತಲೆನೋವು ಸಾಮಾನ್ಯವಾಗಿರುತ್ತದೆ. ಒಬ್ಬರಿಗೆ ಬಂದರೆ ಸಾಕು ಮನೆ ಮಂದಿಯನ್ನೆಲ್ಲಾ ಕಾಡುತ್ತದೆ. ಹಾಗಾಗಿ ನೆಗಡಿ, ಕೆಮ್ಮು ಬಾರದಂತೆ ಮುನ್ನೆಚ್ಚರಿಕೆಯ ಕ್ರಮ ವಹಿಸುವುದು ಮುಖ್ಯ. ಕೆಮ್ಮು, ನೆಗಡಿ ಉಂಟಾದರೆ ಮನೆಯಲ್ಲಿಯೇ ಔಷಧಿ ತಯಾರಿಸಿಕೊಂಡು ಗುಣಮುಖರಾಗಬಹುದು.
· ತುಳಸಿ ಎಲೆಯನ್ನು ಬಿಸಿನೀರಿನಲ್ಲಿ ಹಾಕಿ ಕುಡಿಯುವುದರಿಂದ ನೆಗಡಿ, ಕೆಮ್ಮು ಬರುವುದಿಲ್ಲ.
· ಅಲರ್ಜಿ ಸಮಸ್ಯೆ ಇದ್ದರೆ ಕರವಸ್ತ್ರಕ್ಕೆ ನೀಲಗಿರಿ ಎಣ್ಣೆ ಹಾಕಿ ವಾಸನೆ ತೆಗೆದುಕೊಳ್ಳಿ. ಇದರಿಂದ ಸೀನು ಬರುವುದಿಲ್ಲ.
· ಮುಖ ತೊಳೆಯಲು, ಸ್ನಾನ ಮಾಡಲು ಬಿಸಿನೀರನ್ನೇ ಬಳಸಿ.
· ಒಂದು ಚಮಚ ಜೇನಿಗೆ ಸ್ವಲ್ಪ ಕರಿಮೆಣಸಿನ ಪುಡಿ ಮಾಡಿ ಅದಕ್ಕೆ ತುಳಸಿ ರಸ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮೊದಲು ಸೇವಿಸಿ.
· ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಮತ್ತು ಒಂದು ಎಸಳು ಬೆಳ್ಳುಳ್ಳಿ ಹಾಕಿ ಕುದಿಸಿ ಕುಡಿಯಿರಿ.
· ಶುಂಠಿ ಕಾಫಿ ಮಾಡಿ ಕುಡಿದರೆ ಶೀತ, ಕೆಮ್ಮು, ತಲೆ ನೋವು ಕಡಿಮೆಯಾಗುತ್ತದೆ. ಕಾಫಿ ಕುಡಿಯದವರು, ಶುಂಠಿ ಸೇರಿಸಿ ಟೀ ಮಾಡಿ ಕುಡಿಯಬಹುದು.
ಮಳೆಗಾದಲ್ಲಿ ಮನೆ ಹೊರಗಡೆ ನೀರು ಸೇವಿಸುವುದನ್ನು ಕಡಿಮೆ ಮಾಡಬೇಕಾಗುತ್ತದೆ. ಮನೆಯಲ್ಲಿ ನೀರು ಕುಡಿಯುವ ಮುನ್ನ ಬಿಸಿ ಮಾಡಿ ಅಥವಾ ಶುದ್ಧೀಕರಿಸಿದ ನೀರನ್ನು ಕುಡಿಯುವುದು ಉತ್ತಮ. ಹೊರ ಭಾಗಗಳಿಗೆ ಹೋಗುವ ಬಾಟಲಿಗಳಲ್ಲಿ ನೀರು ಕೊಂಡೊಯ್ಯುವುದು ಉತ್ತಮ. ಇದರಿಂದ ನೀರಿನಿಂದ ಉಂಟಾಗುವ ರೋಗಗಳನ್ನು ಕಡಿಮೆ ಮಾಡಲು ಸಾಧ್ಯವಿದೆ.
ದೇಹ ಶುದ್ಧವಾಗಿಟ್ಟುಕೊಳ್ಳಿ