ಗುಂಡ್ಲುಪೇಟೆ: ಹೆಣ್ಣು ಮಕ್ಕಳು ಋತು ಚಕ್ರದ ಸಂದರ್ಭದಲ್ಲಿ ಆರೋಗ್ಯ ಹಾಗೂ ಸ್ವಚ್ಛತೆ ಕಡೆ ಹೆಚ್ಚು ಗಮನ ನೀಡಿ ಎಂದು ಹುಂಡೀಪುರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುನೀತಾ ತಿಳಿಸಿದರು.
ತಾಲೂಕಿನ ಅಣ್ಣೂರುಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಬ್ಲಾಕ್ ಸೊಸೈಟಿ ಹಾಗೂ ಅಣ್ಣೂರುಕೇರಿ ಪ್ರೌಢಶಾಲಾ ಸಹಯೋಗದಲ್ಲಿ ನಡೆದ ಬಾಲ್ಯ ವಿವಾಹ ಬಾಲ ಕಾರ್ಮಿಕ ಪದ್ದತಿ,ಪೋಕ್ಸೋ ಕಾಯ್ದೆ ಹಾಗೂ ಹದಿಹರೆಯದ ಮಕ್ಕಳ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಏರ್ಪಡಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ತಿಂಗಳು ಋತು ಚಕ್ರ ಸಂದರ್ಭದಲ್ಲಿ ಬಳಸಿದ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಕಲುಷಿತ ಬಟ್ಟೆ ಹಾಗೂ ಇತರ ವಸ್ತುಗಳನ್ನು ಬಳಸಿದರೆ ರಕ್ತ ಹೀನತೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ವೈದ್ಯರ ಸಲಹೆ ಪಡೆಯುವುದು ಉತ್ತಮ. ಬೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಆರೋಗ್ಯವೇ ತಳಹದಿ. ಸರಿಯಾದ ರೀತಿ ಊಟ, ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಾಹಿತಿ ಕಾಳಿಂಗಸ್ವಾಮಿ ಸಿದ್ಧಾರ್ಥ್ ಮಾತನಾಡಿ, ಮಕ್ಕಳು ಪ್ರೌಢಾವಸ್ಥೆಯಲ್ಲಿ ವ್ಯವಸಗಳಿಗೆ ದಾಸರಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಆದ್ದರಿಂದ ಶಿಕ್ಷಕರು ಹಾಗೂ ಪೋಷಕರು ತಮ್ಮ ಮಕ್ಕಳ ಚಲನವಲನ ಗಮನಿಸಿ ಪ್ರತಿ ನಿತ್ಯ ಓದುವ ಕಡೆ ಗಮನ ನೀಡುವಂತೆ ಕ್ರಮ ವಹಿಸಲು ಮುಂದಾಗಬೇಕೆಂದು ತಿಳಿಸಿದರು.
ಮಹಿಳಾ ಸಾಂತ್ವನ ಘಟಕದ ಮಹೇಶ್ ಮಾತನಾಡಿ, ಬಾಲ್ಯ ವಿವಾಹ, ,ಪೋಕ್ಸೋ ಕಾಯ್ದೆ ಬಗ್ಗೆ ತಿಳುವಳಿಕೆ ನೀಡಿದರು.
ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಯೋಜನಾಧಿಕಾರಿ ಜಿ.ಸಿ.ನಾರಾಯಣ್ ಸ್ವಾಮಿ ಮಾತನಾಡಿ, ಮಕ್ಕಳ ಹಕ್ಕುಗಳ ಸಂರಕ್ಷಣೆ ಹಾಗೂ ಬಾಲ ಕಾರ್ಮಿಕ ಪದ್ದತಿ ನಿಷೇಧ ಕುರಿತು ತಿಳಿಸಿದರು.
ಉಪ ಪ್ರಾಂಶುಪಾಲರಾದ ಚಿನ್ನಯ್ಯ, ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಅಧ್ಯಕ್ಷೆ ದ್ರಾಕ್ಷಾಯಿಣಮ್ಮ, ಸಂಯೋಜಕರಾದ ಎಂ.ಗುರುಮಲ್ಲಮ್ಮ, ಜಯಲಕ್ಷ್ಮಿ, ಮಂಜುಳ, ದೇವಮ್ಮಣಿ, ಬೆಳ್ಳಮ್ಮ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಹಾಜರಿದ್ದರು.