ಮಂಗಳೂರು(ದಕ್ಷಿಣ ಕನ್ನಡ): ಮಸೀದಿ-ಮದ್ರಸಗಳ ಅಧೀನದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿನ ಇಂಗ್ಲಿಷ್, ವಿಜ್ಞಾನ, ಗಣಿತ ಶಿಕ್ಷಕರಿಗೆ ಅಝೀಮ್ ಪ್ರೇಮ್ ಜಿ ಫೌಂಡೇಶನ್ ಮೂಲಕ ವೇತನ ಪಾವತಿಸಲು ಮಾತುಕತೆ ನಡೆಸಲಾಗಿದೆ. ಪ್ರಸಕ್ತ ವರ್ಷ 10 ಶಾಲೆಗಳ ಶಿಕ್ಷಕರಿಗೆ ವೇತನ ನೀಡಲು ಫೌಂಡೇಶನ್ ಒಪ್ಪಿಕೊಂಡಿವೆ. ಮುಂದಿನ ವರ್ಷ 100 ಶಾಲೆಗಳ ಶಿಕ್ಷಕರಿಗೆ ವೇತನ ಪಾವತಿಸಲು ಅಝೀಮ್ ಪ್ರೇಮ್ ಜಿ ಫೌಂಡೇಶನ್ ಭರವಸೆ ನೀಡಿದೆ ಎಂದು ಮೀಫ್ ಗೌರವಾಧ್ಯಕ್ಷ ಉಮರ್ ಟಿ.ಕೆ ಹೇಳಿದ್ದಾರೆ.
ಅವರು ಮಂಗಳೂರು ನಗರದ ಜಂಇಯ್ಯತುಲ್ ಫಲಾಹ್ ಹಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇದೇ ವೇಳೆ ಮಾತನಾಡಿದ ಮುಸ್ಲಿಂ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್‌ನ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಶೇಕಡಾ 67ರಷ್ಟಿದ್ದ ಫಲಿತಾಂಶವನ್ನು ಶಿಕ್ಷಣ ತಜ್ಞರಿಂದ ನಡೆಸಲಾದ ಪ್ರೇರಣಾ ಶಿಬಿರಗಳ ಮೂಲಕ ಶೇಕಡಾ 95ಕ್ಕೆ ಏರಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಫಲಿತಾಂಶವನ್ನು ಶೇಕಡಾ 100ರಷ್ಟು ಸಾಧಿಸುವ ಗುರಿ ಹಮ್ಮಿಕೊಳ್ಳಲಾಗಿದೆ.
ಎರಡು ದಶಕದ ಹಿಂದೆ 34 ಖಾಸಗಿ ಅನುದಾನ ರಹಿತ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಗ್ಗೂಡುವಿಕೆಯಿಂದ ಆರಂಭಗೊಂಡ ಈ ಸಂಸ್ಥೆಯಲ್ಲಿ ಇದೀಗ 180ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿವೆ. 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 6 ಸಾವಿರಕ್ಕೂ ಅಧಿಕ ಶಿಕ್ಷಕರಿದ್ದಾರೆ. ಮೀಫ್ ನ ಈ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದರು.